
ಚೆನ್ನೈ, ಆಗಸ್ಟ್ 18: ಪುಣೇರಿ ಪಲ್ಟನ್ ತಂಡ ರಕ್ಷಣನಾತ್ಮಕ ಆಟದ ಎದುರು ತಬ್ಬಿಬ್ಬಾದ ಆತಿಥೇಯ ತಮಿಳ್ ತಲೈವಾಸ್ ತಂಡ ಏಳನೇ ಆವೃತ್ತಿಯ ಪ್ರೊ ಕಬಡ್ಡಿಯ ಲೀಗ್ ಪಂದ್ಯದಲ್ಲಿ 31-31 ಅಂಕಗಳ ಅಂತರದ ಡ್ರಾ ಫಲಿತಾಂಶಕ್ಕೆ ತೃಪ್ತಿ ಪಡಬೇಕಾಯಿತು.
ಪ್ರೊ ಕಬಡ್ಡಿ 2019: ಪಂದ್ಯಗಳು / ಫಲಿತಾಂಶ / ಅಂಕಪಟ್ಟಿ / ಹೆಚ್ಚಿನ ಮಾಹಿತಿ
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಪುಣೆ ತಂಡಕ್ಕೆ ಎದುರಾಗಬೇಕಿದ್ದ ಸೋಲನ್ನು ತಪ್ಪಿಸಿದ ಶ್ರೇಯಸ್ಸು ಡಿಫೆಂಡರ್ ಸುರ್ಜೀತ್ ಅವರಿಗೆ ಸಲ್ಲುತ್ತದೆ. ಪಲ್ಟನ್ ಪಡೆಯ ಭದ್ರ ಕೋಟೆಯಂತೆ ನಿಂತ ಸುರ್ಜೀತ್, ಒಟ್ಟು 7 ಅಂಕಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಆಟಗಾರನೆನಿಸಿದರು.
ರೇಡಿಂಗ್‌ನಲ್ಲಿ ಪಂಕಜ್ ಮೋಹಿತೆ (7), ನಿತಿನ್ ತೋಮರ್ (5) ಹಾಗೂ ಮಂಜೀತ್ (5) ಉತ್ತಮ ಕೊಡುಗೆ ಸಲ್ಲಿಸಿದರು. ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಪುಣೆ ತಂಡ 15-13 ಅಂತರದಲ್ಲಿ ಮೇಲುಗೈ ಪಡೆದಿತ್ತಾದರೂ ದ್ವಿತೀಯ ಅವಧಿಯಲ್ಲಿ ಹಿನ್ನಡೆ ಸನುಭವಿಸಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಒತ್ತಡ ನಿಭಾಯಿಸುವಲ್ಲಿ ಯಶಸ್ವಿಯಾಗಿ ಟೈ ಫಲಿತಾಂಶ ತಂದುಕೊಂಡಿತು.
ಮತ್ತೊಂದೆಡೆ ಸ್ಟಾರ್ ಆಟಗಾರರ ದಂಡನ್ನೇ ಹೊಂದಿರುವ ತಮಿಳ್ ತಲೈವಾಸ್ ತವರ ನೆಲದಲ್ಲಿ ಗೆಲುವಿಗಾಗಿ ಪರದಾಡುವಂತಾಗಿದೆ. ತಂಡದ ಪ್ರಮುಖ ರೇಡರ್ ರಾಹುಲ್ ಚೌಧರಿ (8) ಮತ್ತು ಯುವ ಆಟಗಾರ ಅಜಿತ್ ಕುಮಾರ್ (8) ಗಮನ ಸೆಳೆದರಾದರೂ, ನಾಯಕ ಅಜಯ್ ಠಾಕೂರ್ (1) ಅವರ ವೈಫಲ್ಯ ಮತ್ತೊಮ್ಮೆ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಿತು. ಡಿಫೆನ್ಸ್‌ನಲ್ಲಿ ರಣ್ ಸಿಂಗ್ (4) ಮತ್ತು ಮೋಹಿತ್ ಚಿಲ್ಲರ್ (3) ಆಸರೆಯಾದರು.
ಟೈ ಫಲಿತಾಂಶ ಕಂಡ ತಲೈವಾಸ್ ತಂಡ ಆಡಿದ 8 ಪಂದ್ಯಗಳಿಂದ ತಲಾ 3 ಜಯ ಮತ್ತು ಸೋಲಿನೊಂದಿಗೆ ಹಾಗೂ 2 ಟೈ ಫಲಿತಾಂಶಗಳಿಂದ ಒಟ್ಟು 23 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದೆ.
ಮತ್ತೊಂದೆಡೆ ಕಳಾಹೀನ ಪ್ರದರ್ಶನ ಮುಂದುವರಿಸಿರುವ ಪಲ್ಟನ್ ಪಡೆ, ಅಷ್ಟೇ ಪಂದ್ಯಗಳಲ್ಲಿ 5 ಸೋಲು, 2 ಜಯ ಮತ್ತು 1 ಟೈ ಫಲಿತಾಂಶದೊಂದಿಗೆ 14 ಅಂಕಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಅಂಕಪಟ್ಟಿಯ ಕೊನೆಯ ಹಾಗೂ 12ನೇ ಸ್ಥಾನದಲ್ಲೇ ಉಳಿದಿದೆ.
ಪುಣೇರಿ ಪಲ್ಟನ್ ತಂಡ ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಮತ್ತೊಂದೆಡೆ ತಮಿಳ್ ತಲೈವಾಸ್ ತಂಡ ಬುಧವಾರ ಎರಡನೇ ಪಂದ್ಯದಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಸೆಣಸಲಿದೆ.