ಕೊನೆಯ ಕ್ಷಣದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಬೆಂಗಳೂರು ಬುಲ್ಸ್, 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಎರಡನೇ ಸೋಲು ಕಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 30-32 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲು ಕಂಡಿತು.
ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬುಲ್ಸ್ ಪಂದ್ಯವನ್ನು ಗೆಲ್ಲಬಹುದು ಎಂದೇ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಇಲ್ಲದ ಟ್ಯಾಕಲ್ ಹಾಗೂ ರೇಡ್ ಮಾಡಿದ ಬುಲ್ಸ್ ಮತ್ತೊಂದು ಸೋಲಿಗೆ ಶರಣಾಯಿತು.

ಪಂದ್ಯದ ಕೊನೆಯ ನಾಲ್ಕನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಅಂಕಗಳಲ್ಲಿ ಸಮಬಲ ಸಾಧಿಸಿತು. ಆದರೆ ಇಲ್ಲಿಂದ ಅಂಕಗಳನ್ನು ತಡೆಯಲು ಹಾಗೂ ಅಂಕಗಳನ್ನು ಪಡೆಯುವಲ್ಲಿ ವಿಫಲವಾಯಿತು.
ಎರಡನೇ ಅವಧಿಯ ಆರಂಭದಲ್ಲಿ ಬೆಂಗಳೂರು ಬುಲ್ಸ್ ಆಲೌಟ್ ಆಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಗಾಲ ಸಹ ಅಂಗಳ ಖಾಲಿ ಮಾಡಿತು. ಪರಿಣಾಮ ಪಂದ್ಯ ರೋಚಕತೆಯಿಂದ ಕೂಡಿತು.
ಅಹಮದಾಬಾದ್ನ EKA ಅರೇನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಫೈಟ್ ಕಂಡು ಬಂದಿತು. ಬೆಂಗಾಲ್ ವಾರಿಯರ್ಸ್ ಪರ ಮನಿಂದರ್ ಸಿಂಗ್ ಸತತ ರೇಡ್ ಗಳಲ್ಲಿ ಅಂಕಗಳನ್ನು ಕಲೆ ಹಾಕಿದರು. ಇತ್ತ ಬೆಂಗಳೂರು ಬುಲ್ಸ್ ತಂಡಕ್ಕೆ ಭರತ್ ಬ್ಯಾಕ್ ಟು ಬ್ಯಾಕ್ ಅಂಕಗಳನ್ನು ತಂದುಕೊಟ್ಟರು.

ಮೊದಲಾವಧಿಯಲ್ಲಿ ಬೆಂಗಾಲ್ ಉತ್ತಮ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಬೆಂಗಾಲ್ 14-11 ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬುಲ್ಸ್ ತಂಡದ ರೇಡರ್ ಗಳನ್ನು ಮಂಕಾದಂತೆ ಕಂಡು ಬಂದರು.
ಎರಡನೇ ಅವಧಿಯಲ್ಲಿ ಜಿದ್ದಾಜಿದ್ದಿನ ಫೈಟ್ ಕಂಡು ಬಂದಿತು. ಈ ಅವಧಿಯಲ್ಲಿ ಬೆಂಗಳೂರು ಅಮೋಘ ಆಟದ ಪ್ರದರ್ಶನ ನೀಡಿ ಸತತ ಅಂಕಗಳನ್ನು ಕಲೆ ಹಾಕಿತು. ಎರಡನೇ ಅವಧಿಯಲ್ಲಿ ಬೆಂಗಳೂರು ದಾಳಿಯಲ್ಲಿ 9, ಟ್ಯಾಕಲ್ ನಲ್ಲಿ 6 ಪಾಯಿಂಟ್ ಬುಟ್ಟಿಗೆ ಹಾಕಿಕೊಂಡಿತು.
ಬೆಂಗಳೂರು ಬುಲ್ಸ್ ದಾಳಿಯಲ್ಲಿ 12 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಒಂದು ಬಾರಿ ಸೂಪರ್ ರೇಡ್ ಅಂಕ ಕಲೆ ಹಾಕಿತು. ಅಲ್ಲದೆ ಟ್ಯಾಕಲ್ ನಲ್ಲಿ 11 ಅಂಕಗಳನ್ನು ಕಬಳಿಸಿತು.