10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿರುವ ಬೆಂಗಾಲ್ ವಾರಿಯರ್ಸ್ 60-42 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.
ಬೆಂಗಳೂರಿನ ಶ್ರೀ ಕಂಠೀರವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಆವೃತ್ತಿಯ ಪಂದ್ಯದಲ್ಲಿ ಬೆಂಗಾಲ್ ಅಮೋಘ ಆಟದ ಪ್ರದರ್ಶನ ನೀಡಿತು. ಬೆಂಗಾಲ್ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಡ್ರಾ ಸಾಧಿಸಿದ್ದು, ಅಜೇಯ ಓಟವನ್ನು ಮುಂದುವರೆಸಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ಪಾಟ್ನಾ ಪೈರೇಟ್ಸ್ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಕಂಡಿದ್ದು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಬೆಂಗಾಲ್ ತಂಡ 27-16 ಅಂಕಗಳ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಾಳಿಯಲ್ಲಿ 21 ಅಂಕಗಳನ್ನು, ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಹಾಗೂ ಆಲೌಟ್ ಮೂಲಕ ಎರಡು ಅಂಕಗಳನ್ನು ಕಲೆ ಹಾಕಿತು.
ಎರಡನೇ ಅವಧಿಯಲ್ಲಿ ಪುಟಿದೇಳುವ ಪಾಟ್ನಾ ಪುಟಿದೇಳುವ ಸೂಚನೆ ನೀಡಿದರು ಅದು ಸಾಧ್ಯವಾಗಲಿಲ್ಲ. ಕೊನೆಯ 20 ನಿಮಿಷದ ಆಟ ಸಹ ಬೆಂಗಾಲ್ ತನ್ನದಾಗಿಸಿಕೊಂಡಿತು. ಈ ಅವಧಿಯಲ್ಲಿ ಬೆಂಗಾಲ್ ಒಟ್ಟು 33-26 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ದಾಳಿಯಲ್ಲಿ 21 ಅಂಕಗಳನ್ನು, ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಹಾಗೂ ಆಲೌಟ್ ಮೂಲಕ 4 ಅಂಕಗಳನ್ನು ಕಲೆ ಹಾಕಿತು.
ಬೆಂಗಾಲ್ ತಂಡದ ಪರ ಮುವರು ಆಟಗಾರರು 10 ಹಾಗೂ ಅದಕ್ಕಿಂತ ಹೆಚ್ಚಿನ ಅಂಕವನ್ನು ಕಲೆ ಹಾಕಿದರು. ನಾಯಕ ಮನಿಂದರ್ ಸಿಂಗ್ ಒಟ್ಟು 16 ಬಾರಿ ದಾಳಿ ನಡೆಸಿ 15 ಅಂಕ ಕಲೆ ಹಾಕಿದರು. ಇವರು ಒಂದು ಬಾರಿ ಮಾತ್ರ ಎಮ್‌ಟಿ ರೇಡ್ ನಡೆಸಿದ್ದು ವಿಶೇಷ.
ಇನ್ನು ನಿತೀನ್ ಕುಮಾರ್ 11 ಬಾರಿ ದಾಳಿ ನಡೆಸಿ 14 ಅಂಕ ಬಾಚಿಕೊಂಡರು. ಮತ್ತೊಬ್ಬ ಸ್ಟಾರ್ ರೇಡರ್ ಶ್ರೀಕಾಂತ್ ಜಾದವ್ 12 ಅಂಕಗಳನ್ನು ಪಡೆದು ಗೆಲುವಿನಲ್ಲಿ ಮಿಂಚಿದರು. ಪಾಟ್ನಾ ಪೈರೇಟ್ಸ್ ಪರ ಸಚಿನ್ ಹಾಗೂ ಸುಧಾಕರ್ ತಲಾ 14 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.