pro kabaddi 2023: ಡೆಲ್ಲಿ ಎದುರು ಡುಬ್ಕಿ ಹೊಡೆದ ಬುಲ್ಸ್, ಪುಣೇರಿಗೆ ಜಯ
ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತನ್ನ ಕಳಪೆ ಪ್ರದರ್ಶನವನ್ನು ತವರಿನಲ್ಲೂ ಮುಂದುವರೆಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 31-38 ರಿಂದ ದಬಾಂಗ್ ದೆಹಲಿ ಕೆ.ಸಿ ತಂಡದ ವಿರುದ್ಧ ಸೋಲು ಕಂಡಿತು.
ಶನಿವಾರದಿಂದ ಬೆಂಗಳೂರಿನಲ್ಲಿ 10ನೇ ಆವೃತ್ತಿಯ ಕಬಡ್ಡಿಯನ್ನು ಆಡಲಾಯಿತು. ಆರಂಭದಿಂದಲೂ ದಬಾಂಗ್ ತಂಡ ಬುಲ್ಸ್ ತಂಡದ ಮೇಲೆ ಒತ್ತಡವನ್ನು ಹೇರಿತು. ಎರಡನೇ ಅವಧಿಯಲ್ಲಿ ಕೊಂಚ ಚೇತರಿಕೆಯ ಆಟವನ್ನು ಆಡಿದರೂ ಬುಲ್ಸ್ ತಂಡ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ತಪ್ಪಿಸಿಕೊಳ್ಳಲು ಆಗಲಿಲ್ಲ.

10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಆಡಿದ ಮೂರು ಪಂದ್ಯಗಳನ್ನು ಸೋತು, ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ಗೆಲುವಿನೊಂದಿಗೆ ದಬಾಂಗ್ ದೆಹಲಿ ಐದು ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಬೆಂಗಳೂರು ಬುಲ್ಸ್ ಮೊದಲಾವಧಿಯಿಂದಲೂ ದಬಾಂಗ್ ತಂಡದ ರಣತಂತ್ರಕ್ಕೆ ಸಿಕ್ಕು ನಲುಗಿತು. ಈ ಅವಧಿಯಲ್ಲಿ ಡೆಲ್ಲಿ 17-12 ಅಂಕಗಳಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಈ ಅವಧಿಯಲ್ಲಿ ಬುಲ್ಸ್ ಒಮ್ಮೆ ಅಂಗಳವನ್ನು ಖಾಲಿ ಮಾಡಿ ಬೋನಸ್ ಅಂಕವನ್ನು ಎದುರಾಳಿ ತಂಡಕ್ಕೆ ನೀಡಿತು.

ಕೊನೆಯ 20 ನಿಮಿಷದಲ್ಲಿ ಬೆಂಗಳೂರು ಉತ್ತಮ ಆಟದ ಪ್ರದರ್ಶನವನ್ನು ನೀಡಿತು. ಆದರೆ, ಡೆಲ್ಲಿ ತನ್ನ ಆಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿತು. ಬುಲ್ಸ್ 19-21 ರಿಂದ ಹಿನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಅಂಗಳವನ್ನು ಖಾಲಿ ಮಾಡಿದವು.
ಬೆಂಗಳೂರು ತಂಡ 43 ಬಾರಿ ಎದುರಾಳಿ ತಂಡದ ಕೋರ್ಟ್‌ಗೆ ಎಂಟ್ರಿ ನೀಡಿ 16 ಅಂಕ, ಡೆಲ್ಲಿ ತಂಡ 42 ಬಾರಿ ದಾಳಿ ನಡೆಸಿ 20 ಅಂಕ ಸೇರಿಸಿತು. ಇನ್ನು ಬುಲ್ಸ್ 23 ಬಾರಿ ಎದುರಾಳಿಯನ್ನು ಹಿಡಿಯುವಲ್ಲಿ ಪ್ರಯತ್ನದಲ್ಲಿ 6 ಬಾರಿ ಮಾತ್ರ ಸಫಲವಾಯಿತು.

ಡೆಲ್ಲಿ ತಂಡದ ಪರ ನವೀನ್ ಕುಮಾರ್ 13, ಅಶು ಮಲಿಕ್ 10 ಅಂಕವನ್ನು ಕಲೆ ಹಾಕಿದರು. ಬೆಂಗಳೂರು ಪರ ಭರತ್ 12 ಅಂಕವನ್ನು ಕಲೆ ಹಾಕಿ ಮಿಂಚಿದರು.
ಮುಂಬಾಗೆ ಸೋಲು
ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ 42-32ರಿಂದ ಯು ಮುಂಬಾ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಮೋಹಿತ್ 12 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಈ ಗೆಲುವಿನೊಂದಿಗೆ ಪುಣೇರಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications