10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 42ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಭರ್ಜರಿ ಗೆಲುವು ದಾಖಲಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ 46-28 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪುಣೇರಿ ಆಡಿದ 7 ಪಂದ್ಯಗಳಲ್ಲಿ 6 ಜಯ, 1 ಸೋಲು ಕಂಡಿದ್ದು 31 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಸೋತಿರುವ ಪಾಟ್ನಾ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಮೊದಲಾವಧಿಯ ಆಟದಿಂದಲೂ ಪುಣೇರಿ ಮಾಜಿ ಚಾಂಪಿಯನ್ನರ ಮೇಲೆ ಹಿಡಿತ ಸಾಧಿಸಿತು. ಈ ಅವಧಿಯಲ್ಲಿ ಪುಣೇರಿ ಭರ್ಜರಿ ಆಟವನ್ನು ಪ್ರದರ್ಶಿಸಿತು. ರೇಡ್‌ನಲ್ಲಿ ಪುಣೇರಿ ಮೊದಲ 20 ನಿಮಿಷದಲ್ಲಿ 13 ಅಂಕ ಬಾಚಿಕೊಂಡಿತು. ಅಲ್ಲದೆ ಟ್ಯಾಕಲ್‌ನಲ್ಲಿ 7 ಅಂಕ ಪೇರಿಸಿತು. ಈ ಅವಧಿಯಲ್ಲಿ ಪಾಟ್ನಾ ತಂಡವನ್ನು ಪುಣೇರಿ ಒಮ್ಮೆ ಆಲೌಟ್ ಮಾಡಿತು.
ಎರಡನೇ ಅವಧಿಯಲ್ಲೂ ಅಂಕದ ಬೇಟೆ ನಡೆಸಿ ಪುಟಿದೇಳುವ ಪಾಟ್ನಾ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲಿ ಪುಣೇರಿ ಅಬ್ಬರದ ಆಟವನ್ನು ಪ್ರದರ್ಶಿಸಿತು. ಪುಣೇರಿ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ಅಲ್ಲದೆ 12 ಅಂಕವನ್ನು ಕಲೆ ಹಾಕಿತು. ರಕ್ಷಣಾ ವಿಭಾಗದಲ್ಲೂ ಪುಣೇರಿ ಸ್ಥಿರ ಆಟದ ಪ್ರದರ್ಶನ ನೀಡಿತು. ಅಲ್ಲದೆ ಈ ಅವಧಿಯಲ್ಲೂ ಪಾಟ್ನಾ ತಂಡವನ್ನು ಎರಡು ಬಾರಿ ಆಲೌಟ್ ಮಾಡಿತು.
ಪುಣೇರಿ ಪರ ಪಂಕಜ್ ಮೋಹಿತೆ ಆರ್ಭಟಿಸಿದರು. ಇವರು ಒಟ್ಟು 10 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ರೇಡ್ ಪಾಯಿಂಟ್ಸ್ ಹಾಗೂ 1 ಟ್ಯಾಕಲ್ ಪಾಯಿಂಟ್ ಸೇರಿದಂತೆ 11 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಅಲ್ಲದೆ ಮೋಹಿತ್ 9 ಅಂಕ ಪೇರಿಸಿದರು.
ಪರಾಜಿತ ತಂಡದ ಪರ ಸಚಿನ್ ಉತ್ತಮ ದಾಳಿ ನಡೆಸಿ ಸೋಲಿನಲ್ಲಿ ಮಿಂಚಿದರು.