Pro Kabaddi 2023: ಯೋಧಾಸ್, ಪೈರೇಟ್ಸ್‌ಗೆ ಭರ್ಜರಿ ಗೆಲುವು
ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು.ಪಿ ಯೋಧಾಸ್ ಹಾಗೂ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡಗಳು ಭರ್ಜರಿ ಗೆಲುವು ದಾಖಲಿಸಿವೆ.
ಬುಧವಾರ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಯು.ಪಿ ಯೋಧಾಸ್ 57-27 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿದರೆ, ಇನ್ನೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 50-28 ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಜಯದ ಮೂಲಕ ಯು.ಪಿ ಯೋಧಾಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಟೂರ್ನಿಯಲ್ಲಿ ಮೊದಲ ಜಯದ ನಗೆ ಬೀರಿವೆ.

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಮೊದಲಾವಧಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಅಂಕಗಳನ್ನು ಬೇಟೆ ಆಡಿತು. ಮೊದಲ 20 ನಿಮಿಷದಲ್ಲಿ ಪಾಟ್ನಾ 28-16 ರಿಂದ ಮುನ್ನಡೆ ಸಾಧಿಸಿತ್ತು. ಈ ವೇಳೆ ಎರಡು ಬಾರಿ ತೆಲುಗು ತಂಡದ ಅಂಗಳವನ್ನು ಖಾಲಿ ಮಾಡಿತು.
ಎರಡನೇ ಅವಧಿಯಲ್ಲೂ ಇದೇ ಆಟವನ್ನು ಮುಂದುವರೆಸಿದ ಪಾಟ್ನಾ 22-12 ರಿಂದ ಮುನ್ನಡೆ ಸಾಧಿಸಿ, ಸುಲಭವಾಗಿ ಪಂದ್ಯವನ್ನು ಗೆದ್ದಿತು. ಈ ಅವಧಿಯಲ್ಲೂ ಪಾಟ್ನಾ, ಒಮ್ಮೆ ಎದುರಾಳಿ ತಂಡದ ಅಂಗಳವನ್ನು ಒಮ್ಮೆ ಖಾಲಿ ಮಾಡಿತು.

ಒಟ್ಟಾರೆ ಪಾಟ್ನಾ 44 ಬಾರಿ ಎದುರಾಳಿ ಅಂಗಳಕ್ಕೆ ಎಂಟ್ರಿ ನೀಡಿ 20 ಅಂಕಗಳನ್ನು ಗಳಿಸಿತು. ಇದರಲ್ಲಿ ಒಂದು ಸೂಪರ್ ರೇಡ್ ಸಹ ಸೇರಿದೆ. ಇನ್ನು ತೆಲುಗು 11 ರೇಡ್ ಪಾಯಿಂಟ್ಸ್ ಗಳಿಸಿತು. ಟ್ಯಾಕಲ್‌ನಲ್ಲಿ ಪಾಟ್ನಾ 16 ಅಂಕ ಗಳಿಸಿದರೆ, ತೆಲುಗು ಕೇವಲ 9 ಅಂಕ ಪಡೆಯಿತು.
ಪಾಟ್ನಾ ಪರ ಸಚಿನ್ ದಾಳಿಯಲ್ಲಿ 14 ಹಾಗೂ ಮಂಜೀತ್ 8 ಅಂಕಗಳನ್ನು ಬಾಚಿಕೊಂಡರು. ತೆಲುಗು ಪರ ಪವನ್ ಶೇರಾವತ್ 14 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಹರಿಯಾಣಗೆ ಆಘಾತ
ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಸೋಲು ಕಂಡಿತು. ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಯು.ಪಿ ಯೋಧಾಸ್ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮೊದಲಾವಧಿಯಲ್ಲಿ ಯುಪಿ 29-14 ಅಂಕಗಳಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲೂ ಯೋಧಾಸ್ ಎದುರಾಳಿ ತಂಡಕ್ಕೆ ಚೇತರಿಕೆಗೆ ಅವಕಾಶವನ್ನು ನೀಡಲಿಲ್ಲ. ಈ ಅವಧಿಯಲ್ಲೂ ವಿಜೇತ ತಂಡ 28-13 ಅಂಕಗಳನ್ನು ಬಾಚಿಕೊಂಡಿತು. ಒಟ್ಟಾರೆ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ನಾಲ್ಕು ಬಾರಿ ಆಲೌಟ್ ಆಯಿತು.
ಯೋಧಾ ದಾಳಿ ಹಾಗೂ ಟ್ಯಾಕಲ್ ನಲ್ಲಿ ತಲಾ 20 ಅಂಕಗಳನ್ನು ಗಳಿಸಿತು. ಹರಿಯಾಣ ದಾಳಿಯಲ್ಲಿ 10, ಟ್ಯಾಕಲ್‌ನಲ್ಲಿ 9 ಅಂಕ ಸೇರಿಸಿತು. ವಿಜೇತ ತಂಡದ ಪರ ಸುರೇಂದ್ರ ಗಿಲ್ ಹಾಗೂ ಪ್ರದೀಪ್ ನರ್ವಾಲ್ ದಾಳಿಯಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications