ಪ್ರೋ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸೋಲಿನ ಸುಳಿಯಲ್ಲಿ ಸುಲುಕಿಕೊಂಡಿದೆ. 11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 58ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಗೆಲುವು ಸಾಧಿಸಿದೆ. ಬೆಂಗಳೂರು ಬುಲ್ಸ್ ತಂಡವನ್ನು 35-25 ಅಂಕಗಳ ಅಂತರದಲ್ಲಿ ದಬಾಂಗ್ ಡೆಲ್ಲಿ ಕೆಸಿ ಸೋಲಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಬುಲ್ಸ್ ಆಡಿದ 10 ಪಂದ್ಯಗಳಲ್ಲಿ ಕೇವಲ 2 ಜಯ, 8 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ದಬಾಂಗ್ ಡೆಲ್ಲಿ ಕೆಸಿ ಆಡಿದ 11 ಪಂದ್ಯಗಳ ಪೈಕಿ 5 ಗೆಲುವು, 5 ಸೋಲು ಮತ್ತು 1ರಲ್ಲಿ ಡ್ರಾ ಸಾಧಿಸಿದ್ದು, 5 ಸ್ಥಾನದಲ್ಲಿದೆ.
ಶನಿವಾರ ನೋಯ್ಡಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ ವಿರುದ್ಧ ಬೆಂಗಳೂರು ಬುಲ್ಸ್ ಮುಗ್ಗರಿಸಿತು. ಡೆಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಶು ಮಲಿಕ್ ಅಂಕಗಳ ಬೇಟೆಯಾಡಿದರು. ಎರಡು ಬೋನಸ್ ಸೇರಿ 14 ಅಂಕಗಳನ್ನು ಕಲೆ ಹಾಕುವ ಮೂಲಕ ಡೆಲ್ಲಿ ಗೆಲುವಿಗೆ ನೆರವಾದರು. ಆದರೆ, ಬೆಂಗಳೂರು ಬುಲ್ಸ್ ಪಾಳಯದಿಂದ ಯಾವೊಬ್ಬ ಆಟಗಾರನೂ ಜವಾಬ್ದಾರಿಯುತ ಪ್ರದರ್ಶನ ನೀಡಲಿಲ್ಲ. ಸ್ಟಾರ್ ಆಟಗಾರರಾದ ನಿತೀಶ್ ರಾವಲ್ 7, ಪರ್ದೀಪ್ ನರ್ವಾಲ್ 5 ಅಂಕ ಪಡೆಯುವುದಕ್ಕಷ್ಟೇ ಸಿಮೀತವಾದರು. ಪರ್ದೀಪ್ ತಮ್ಮ ಮಿಂಚಿನ ರೈಡ್ ಅನ್ನು ಮುಂದುವರೆಸಿದ್ದರೆ ಬುಲ್ಸ್ ಗೆಲ್ಲುವ ಸಾಧ್ಯತೆಯಿತ್ತು. ಆದರೆ ಮತ್ತೊಂದೆಡೆಯಿಂದ ತಂಡದಲ್ಲಿ ಆಟಗಾರರು ಅವರಿಗೆ ಸಾಥ್ ನೀಡಲಿಲ್ಲ. ಹೀಗಾಗಿ ಬುಲ್ಸ್ 8 ಸೋಲು ಕಾಣುವಂತಾಯಿತು.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ತಮಿಳ್ ತಲೈವಾಸ್ ಮಣಿಸಿದೆ.
ಬೆಂಗಾಲ್ ವಾರಿಯರ್ಸ್ ವಿರುದ್ಧ 46-31 ಅಂಕಗಳ ಅಂತರದಿಂದ ತಮಿಳ್ ತಲೈವಾಸ್ ಭರ್ಜರಿ ಗೆಲುವು ಸಾಧಿಸಿದೆ. ಆರಂಭದಿಂದಲ್ಲೇ ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆದರೆ ವಿಶಾಲ್ ಚಾಹಲ್ ಅವರ ಮಿಂಚಿನ ರೈಡ್‌ನಿಂದಾಗಿ ತಮಿಳ್ ತಲೈವಾಸ್ ಗೆಲುವಿನ ನಗೆ ಬೀರಿತು.
ಬೆಂಗಾಲ್ ವಾರಿಯರ್ಸ್ ಆಡಿದ 10 ಪಂದ್ಯಗಳಲ್ಲಿ 3 ರಲ್ಲಿ ಗೆದ್ದರೆ, 5ರಲ್ಲಿ ಸೋಲು ಮತ್ತು 2 ರಲ್ಲಿ ಡ್ರಾ ಸಾಧಿಸಿ 10 ಸ್ಥಾನದಲ್ಲಿದೆ. ಮತ್ತೊಂದೆಡೆ ತಮಿಳ್ ತಲೈವಾಸ್ ತಂಡ ಆಡಿದ 10 ಪಂದ್ಯಗಳಲ್ಲಿ 4 ಜಯ, 5 ಗೆಲುವು ಮತ್ತು 1ರಲ್ಲಿ ಡ್ರಾ ಕಂಡಿದ್ದು, 7 ಸ್ಥಾನದಲ್ಲಿದೆ.