ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗೆಲ್ಲುವ ಮೂಲಕ ಅಭಿಯಾನ ಶುರು ಮಾಡಿದೆ.
ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಪಟ್ಟು ಬಿಡದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 34-39 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಟೂರ್ನಿಯಲ್ಲಿ ಬೆಂಗಾಲ್ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದು, ಸೋಲಿನ ಕಹಿ ಅನುಭವಿಸಿದೆ.

ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದ ವೇಳೆ ನೆರದಿದ್ದ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಘೋಷಣೆ ಕೂಗಿದ್ದಾರೆ. ಸ್ಟೇಡಿಯಂ ಒಳಗೆ ಕಬಡ್ಡಿ ಪಂದ್ಯ ನಡೆಯುತ್ತಿದ್ದರೂ, ಆರ್‌ಸಿಬಿ ಪರ ಘೋಷಣೆ ಕೂಗಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆಲುವಿಗಾಗಿ ಸೆಣಸಾಡಿತು. ಆದರೆ ಬೆಂಗಳೂರು ಬುಲ್ಸ್ ಹೋರಾಟಕ್ಕೆ ಗೆಲುವು ಸಿಗಲಿಲ್ಲ. ಭರ್ಜರಿ ಪ್ರದರ್ಶನ ತೋರಿದ ಗುಜರಾತ್ ಜೈಂಟ್ಸ್ 36-32 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು.
ಬೆಂಗಳೂರು ಬುಲ್ಸ್ ವಿರುದ್ಧ ಆರಂಭದಿಂದಲ್ಲೇ ಪ್ರಾಬಲ್ಯ ಸಾಧಿಸಿದ ಗುಜರಾತ್ ಜೈಂಟ್ಸ್ ಮುನ್ನಡೆ ಕಾಯ್ದುಕೊಂಡಿತ್ತು. ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಬುಲ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿತ್ತು. ಇದೀಗ ಆಡಿರುವ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಸೋಲು ಅನುಭವಿಸಿದೆ.
ಗುಜರಾತ್ ಜೈಂಟ್ಸ್ ಪರ ಪಾರ್ತೀಕ್ ದಹಿಯಾ, ಗುಮಾನ್ ಸಿಂಗ್ ಮತ್ತು ಸೋಂಬಿರ್ ಅದ್ಭುತ ಪ್ರದರ್ಶನ ನೀಡಿದರೆ, ಬೆಂಗಳೂರು ಬುಲ್ಸ್ ಪರ ಪ ಪರ್ದೀಪ್ ನರ್ವಾಲ್ ಮತ್ತು ಅಜಿಂಕ್ಯ ಪವಾರ್ ಅಂಕಗಳನ್ನು ಕದಿಯುವ ಮೂಲಕ ಮಿಂಚಿದರು. ಪಂದ್ಯದ ಮೊದಲಾರ್ಧದಲ್ಲಿ ಬುಲ್ಸ್ ರೇಡರ್ ಪರ್ದೀಪ್ ನರ್ವಾಲ್ ಇತಿಹಾಸವನ್ನು ಸೃಷ್ಟಿಸಿದರು. ಪ್ರೊ ಕಬಡ್ಡಿ ಇತಿಹಾಸದಲ್ಲಿ 1700 ರೇಡ್ ಪಾಯಿಂಟ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಮೊದಲಾರ್ಧದ ಮಧ್ಯದಲ್ಲಿ ಉಭಯ ತಂಡಗಳು 7-7ರಲ್ಲಿ ಸಮಬಲ ಸಾಧಿಸಿದರು. ಸ್ವಲ್ಪ ಸಮದ ನಂತರ ಗುಜರಾತ್ ಜೈಂಟ್ಸ್ ತಂಡವನ್ನು ಆಲೌಟ್ ಮಾಡಿದ ಬುಲ್ಸ್ ಮುನ್ನಡೆ ಸಾಧಿಸಿತ್ತು. ವಿರಾಮದ ವೇಳೆಗೆ ಬೆಂಗಳೂರು ಬುಲ್ಸ್ 19-16ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದಲ್ಲಿ ಬೆಂಗಳೂರು ಬುಲ್ಸ್ ಎಡುವಿತು.
ದಿಟ್ಟ ಹೋರಾಟ ನಡೆಸಿದ ಗುಜರಾತ್ ದ್ವಿತೀಯಾರ್ಧದ ಮಧ್ಯದಲ್ಲಿ 26-23 ರಿಂದ ಮುನ್ನಡೆ ಸಾಧಿಸಿತು. ಇದೇ ಬಿಗಿ ಹಿಡಿತವನ್ನು ಪಂದ್ಯದ ಮೇಲೆ ಸಾಧಿಸಿದ ಗುಜರಾತ್ ಗೆಲುವಿನ ದಡ ಸೇರಿತು.