ಆಗಸ್ಟ್ 14 ಬುಧವಾರ, ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್ ಕಳೆದ ಹಲವು ವರ್ಷಗಳಿಂದ ಐಪಿಎಲ್ ಟೂರ್ನಿಯಂತೆ ಭಾರೀ ಜನಪ್ರಿಯತೆ ಗಳಿಸಿದೆ. ದೇಶೀಯ ಅಂಗಳದಲ್ಲಿ ಸತತ 10 ಆವೃತ್ತಿಗಳನ್ನು ಪ್ರೊ ಕಬಡ್ಡಿ ಲೀಗ್ ಯಶಸ್ವಿಯಾಗಿ ಪೂರೈಸಿದೆ. ಈ ಬಾರಿಯ 2024ರ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿ ಭಾರೀ ಕುತೂಹಲ ಹೆಚ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ಆಟಗಾರರ ಹರಾಜು ಪ್ರಕ್ರಿಯೆ.
ನಾಳೆ (ಆಗಸ್ಟ್ 15 ಮತ್ತು 16) ಮುಂಬೈನಲ್ಲಿ ಪ್ರೊ ಕಬಡ್ಡಿ ಲೀಗ್ 2024ರ ಹರಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬಲಿಷ್ಠ ಬೆಂಗಳೂರು ಬುಲ್ಸ್ ತಂಡಕ್ಕೆ ಕನ್ನಡಿಗ ಆಟಗಾರನೊಬ್ಬ ಆಯ್ಕೆಯಾಗಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ತನ್ನ ಖದರ್ ತೋರಲು ಕಬಡ್ಡಿ ಕ್ರೀಡಾಪಟು ಉತ್ಸಾಹಗೊಂಡಿದ್ದಾರೆ.

ದಾವಣಗೆರೆಯ ಕಬ್ಬೂರು ಬಸಪ್ಪ ನಗರದ ನಿವಾಸಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಪಟು ಚಂದ್ರನಾಯ್ಕ ಈ ಬಾರಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಡಲು ರೆಡಿಯಾಗಿದ್ದಾರೆ. ಇತ್ತೀಚಿಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಕಬಡ್ಡಿ ಆಯ್ಕೆ ಟ್ರಯಲ್ಸ್‌ನಲ್ಲಿ ಚಂದ್ರನಾಯ್ಕ ಅದ್ಭುತ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದು, ಆಗಸ್ಟ್ 18 ರಂದು ತಂಡಕ್ಕೆ ಸೇರುವ ತವಕದಲ್ಲಿದ್ದಾರೆ.
ಕಡುಬಡತನದಿಂದ ಬೆಳೆದು ಬಂದ ಚಂದ್ರನಾಯ್ಕ ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡರು. ಇದರಿಂದ ಕಂಗೆಡದ ಅವರು ಆರನೇ ತರಗತಿ ಓದುತ್ತಿರುವಾಗಲೇ ಕಬಡ್ಡಿ ಆಡಲು ಪ್ರಾರಂಭಿಸಿದರು. ಈ ಹಂತದಲ್ಲಿ ಆನೇಕ ಸವಾಲುಗಳನ್ನು ಎದುರಿಸಿದ ಅವರು ಛಳ ಬಿಡದೆ ಧೈರ್ಯವಾಗಿ ಮುನ್ನುಗ್ಗಿದರು.
ಸತತ 10 ವರ್ಷಗಳ ಕಾಲ ಕಬಡ್ಡಿ ಅಂಗಳದಲ್ಲಿ ಬೆವರಿಸಿದ ಚಂದ್ರನಾಯ್ಕ ಅವರು ಕರ್ನಾಟಕ ರಾಜ್ಯ ತಂಡವನ್ನು 8 ಬಾರಿ ಪ್ರತಿನಿಧಿಸಿದ ಮಿಂಚಿನ ಪ್ರದರ್ಶನ ನೀಡಿದರು. ಇದಲ್ಲದೆ, ವಿಶ್ವವಿದ್ಯಾನಿಲಯ ಮಟ್ಟದ ಖೇಲೋ ಇಂಡಿಯಾ ರಾಷ್ಟ್ರೀಯ ಸ್ಪರ್ಧೆಯಲ್ಲೂ ಭಾಗವಹಿಸಿ ತಾನು ಉತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿದರು.
ಧಾರವಾಡದಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್‌ನಲ್ಲಿದ್ದುಕೊಂಡು ಚಂದ್ರನಾಯ್ಕ 3 ವರ್ಷ ಕಠಿಣ ತರಬೇತಿ ಪಡೆದಿದ್ದಾರೆ. ಅಲ್ಲದೆ, ದಾವಣಗೆರೆಯ ಸೃಷ್ಟಿ ಕಬಡ್ಡಿ ಅಕಾಡೆಮಿಯ ಕೋಚ್ ಶ್ರೀಶೈಲ ಅವರಿಂದಲೂ ತರಬೇತಿ ಪಡೆದಿದ್ದು, ಅಂಡರ್ 24 ಯುವ ಕಬಡ್ಡಿ ಸರಣಿಯಲ್ಲಿ 'ಕಾಜಿರಂಗ ರೈನೋಸ್' ಟೀಮ್ ನಾಯಕನಾಗಿ ತಂಡ ಮುನ್ನಡೆಸಿದ್ದಾರೆ.
ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಚಂದ್ರನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಚಂದ್ರನಾಯ್ಕ, "ಪ್ರೊ ಕಬಡ್ಡಿ ಲೀಗ್ ಆಯ್ಕೆಗಾಗಿ ನಿರಂತರವಾಗಿ ಅಭ್ಯಾಸ ನಡೆಸಿದ್ದೆ. ಪ್ರಯತ್ನ ಬಿಡದೆ ಅಭ್ಯಾಸ ಮಾಡಿ, ಎಲ್ಲಾ ಕಬಡ್ಡಿ ಸೆಲೆಕ್ಷನ್‌ನಲ್ಲಿ ಭಾಗವಹಿಸಿದ್ದೆ. ಈಗ ಫಲ ಸಿಕ್ಕಿದೆ.
ದಸರಾ ರಜೆ ಮತ್ತು ಪರೀಕ್ಷೆ ಮುಗಿದ ಬಳಿಕ ಸಿಗುತ್ತಿದ್ದ ರಜೆಗಳಲ್ಲಿ ನಮ್ಮ ಅಣ್ಣನೊಂದಿಗೆ ಟೈಲ್ಸ್ ಕೆಲಸಕ್ಕೆ ಹೋಗುತ್ತಿದೆ. ಎಷ್ಟೇ ಕಷ್ಟವಾದರೂ ಕಬಡ್ಡಿ ಅಭ್ಯಾಸ ಬಿಡಬಾರದು, ಬೆಳಗ್ಗೆ ಮತ್ತು ಸಂಜೆ ಇದಕ್ಕೆಂದೇ ಸಮಯ ಮೀಸಲಿಡಬೇಕು. ದಿನಕ್ಕೆ ಒಂದು ಗಂಟೆಯಾದರೂ ಅಭ್ಯಾಸ ಮಾಡಿದರೆ ಒಂದಲ್ಲೊಂದು ದಿನ ಯಶಸ್ಸು ಸಿಗುತ್ತದೆ" ಎಂದಿದ್ದಾರೆ.
"ನಾನು ರೈಟ್ ಕಾರ್ನರ್ ಮತ್ತು ಲೆಫ್ಟ್ ಕಾರ್ನರ್ ಎರಡರಲ್ಲೂ ರೈಡ್ ಮಾಡುತ್ತೇನೆ. ಪ್ರೊ ಕಬಡ್ಡಿಯಲ್ಲಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಸದ್ಯ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗಿದೆ" ಎಂದು ಚಂದ್ರನಾಯ್ಕ ಹೇಳಿದ್ದಾರೆ.