ಪ್ರೋ ಕಬಡ್ಡಿ 11ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ಭಾನುವಾರ ನೋಯ್ಡಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಯುಪಿ ಯೋಧಾಸ್ ಸೋಲು ಕಂಡಿದೆ. ಯುಪಿ ಯೋಧಾಸ್ ತಂಡವನ್ನು 35-33 ಅಂಕಗಳಿಂದ ಯು ಮುಂಬಾ ಸೋಲಿಸಿದೆ. ಈ ಗೆಲುವಿನೊಂದಿಗೆ ಯು ಮುಂಬಾ ತಂಡ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇತ್ತ ಯುಪಿ ಯೋಧಾಸ್ ಸೋಲಿನೊಂದಿಗೆ 10ನೇ ಸ್ಥಾನದಲ್ಲಿದೆ.
ಮೊದಲಾರ್ಧದ ಆರಂಭದಲ್ಲಿ ಯುಪಿ ಯೋಧಾಸ್ ರೈಡರ್‌ಗಳು ಮತ್ತು ಡಿಫೆಂಡರ್‌ಗಳು ಒಟ್ಟಾಗಿ ಅಂಕಗಳ ಬೇಟೆಯಾಡಿದರು. ಪರಿಣಾಮ ಮೊದಲಾರ್ಧದಲ್ಲಿ ಮುಂಬಾ ತಂಡವನ್ನು ಯುಪಿ ಯೋಧಾಸ್ ಆಲೌಟ್ ಮಾಡುವ ಮೂಲಕ ಮುನ್ನಡೆ ಸಾಧಿಸಿತು. ಯುಪಿ ಯೋಧಾಸ್ ಪರ ಶಿವಂ ಚೌಧರಿ ಮತ್ತು ಭರತ್ ಹೂಡಾ ಅದ್ಭುತ ರೇಡ್ ಮಾಡುವ ಮೂಲಕ ಅಂಕಗಳನ್ನು ಗಳಿಸಿದರು. ಎಡ-ಮೂಲೆಯ ಡಿಫೆಂಡರ್ ಸುಮಿತ್ ಕೂಡ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಮೊದಲ 10 ನಿಮಿಷಗಳಲ್ಲಿ ನಿಧಾನಗತಿಯ ಆರಂಭ ಪಡೆದ ಯು ಮುಂಬಾ ನಂತರ ಪುಟಿದೇಳಿತು. ಇದಾದ 7ನೇ ನಿಮಿಷದಲ್ಲಿ ಯುಪಿ ಯೋಧಾಸ್ ಅನ್ನು ಯು ಮುಂಬಾ ಆಲೌಟ್ ಮಾಡಿತು. ಇದರೊಂದಿಗೆ ಮೊದಲಾರ್ಧದಲ್ಲಿ ಯು ಮುಂಬಾ ತನ್ನ ಹಿನ್ನಡೆಯನ್ನು ಕೇವಲ ಒಂದು ಅಂಕಕ್ಕೆ ತಗ್ಗಿಸಿತು. ಯು ಮುಂಬಾ ಸೂಪರ್ ಟ್ಯಾಕಲ್‌ನಲ್ಲಿ ಭರತ್ ಹೂಡಾ ಅವರನ್ನು ಔಟ್ ಮಾಡುವ ಮೂಲಕ ಮೊದಲಾರ್ಧದಲ್ಲಿ ಯು ಮುಂಬಾ 17-16 ಸ್ಕೋರ್ ಅನ್ನು ಕಾಯ್ದುಕೊಂಡಿತ್ತು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಅಟಕ್ಕೆ ಯು ಮುಂಬಾ ಮುಂದಾಯಿತು. ಯು ಮುಂಬಾ ಪರ ರೈಡರ್‌ಗಳು ತಮ್ಮ ನಾಯಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ದ್ವಿತೀಯಾರ್ಧದಲ್ಲಿ ಪಂದ್ಯ ಗತಿಯೇ ಬದಲಾಯಿತು. ಯುಪಿ ಯೋಧಾಸ್ ಕಡೆ ಇದ್ದ ಪಂದ್ಯವನ್ನು ಯು ಮುಂಬಾ ತನ್ನಂತೆ ಮಾಡಿಕೊಂಡಿತ್ತು. ಅಂತಿಮವಾಗಿ ಯು ಮುಂಬಾ ಎರಡನೇ ಬಾರಿಗೆ ಆಲೌಟ್ ಆದರೂ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಭಾನುವಾರ ನೋಯ್ಡಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಿದವು. ಕಾದಾಟದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಗುಜರಾತ್ ಜೈಂಟ್ಸ್ ಮಣಿಸಿದೆ. ಹರಿಯಾಣ ಸ್ಟೀಲರ್ಸ್ ವಿರುದ್ಧ ಮಿಂಚಿನ ದಾಳಿ ನಡೆಸಿದ ಗುಜರಾತ್ ಜೈಂಟ್ಸ್ 39-23 ಅಂಕಗಳ ಅಂತರದಿಂದ ಅದ್ಭುತ ಗೆಲುವು ದಾಖಲಿಸಿದೆ. ಇದರೊಂದಿಗೆ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸೋಲು ಕಂಡ ಹರಿಯಾಣ ಸ್ಟೀಲರ್ಸ್ 7ನೇ ಸ್ಥಾನದಲ್ಲಿದೆ.