11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 53ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಯುಪಿ ಯೋಧಾಸ್ ಕಟ್ಟಿ ಹಾಕಿದೆ. ಯುಪಿ ಯೋಧಾಸ್ 40-34 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಯುಪಿ ಯೋಧಾಸ್ ಆಡಿದ 9 ಪಂದ್ಯಗಳಲ್ಲಿ 4 ರಲ್ಲಿ ಗೆದ್ದರೆ, 5ರಲ್ಲಿ ಸೋಲು ಕಂಡಿದ್ದು 25 ಅಂಕಗಳನ್ನು ಗಳಿಸಿ 8 ಸ್ಥಾನದಲ್ಲಿದೆ. ಮತ್ತೊಂದೆಡೆ ತೆಲುಗು ಟೈಟಾನ್ಸ್ ಆಡಿದ 9 ಪಂದ್ಯಗಳಲ್ಲಿ 5 ಜಯ, 4 ಸೋಲಿನೊಂದಿಗೆ 27 ಅಂಕಗಳ ಕಲೆ ಹಾಕಿದ್ದು, 6ನೇ ಸ್ಥಾನದಲ್ಲಿದೆ.
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಯುಪಿ ಯೋಧಾಸ್ ನಡುವೆ ತೀವ್ರ ಪೈಪೋಟಿ ಕಂಡು ಬಂತು. ಆದರೆ ಯುಪಿ ಯೋಧಾಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು. ಮೊದಲಾರ್ಧದಲ್ಲಿ ಯುಪಿ ಯೋಧಾಸ್ ಅಂಕಗಳ ಬೇಟೆಯಾಡಿತು. ಆದರೂ ತೆಲುಗು ಟೈಟಾನ್ಸ್ ಎದುರು ಮೊದಲ ಬಾರಿಗೆ ಯುಪಿ ಯೋಧಾಸ್ ಆಲೌಟ್ ಆಯಿತು. ಮೊದಲಾರ್ಧವನ್ನು 20-16 ಅಂಕಗಳೊಂದಿಗೆ ಮುಕ್ತಾಯಗೊಳಿಸಿತು.

ಯುಪಿ ಯೋಧಾಸ್ ದ್ವಿತೀಯಾರ್ಧದ ಆರಂಭದಲ್ಲಿ ಅಂತರವನ್ನು ಕಡಿಮೆ ಮಾಡಲು ಹೋರಾಟ ನಡೆಸಿತು. ಹೋರಾಟದಲ್ಲಿ ಯಶಸ್ವಿಯಾದ ಯುಪಿ ಯೋಧಾಸ್ ತಂಡ ತೆಲುಗು ಟೈಟಾನ್ಸ್ ಅನ್ನು ಆಲೌಟ್ ಮಾಡಿತು. ಇದಾದ ಬಳಿಕ ಟೈಟಾನ್ಸ್ ಪರ ವಿಜಯ್ ಮಲಿಕ್ ಅದ್ಭುತ ರೇಡ್ ಮಾಡುವ ಮೂಲಕ ಅಂಕಗಳನ್ನು ಗಳಿಸಿದರು. ಆದರೆ, ಯುಪಿ ಯೋಧಾಸ್ ಸಂಘಟಿತ ಪ್ರದರ್ಶನಕ್ಕೆ ತಲೆ ಬಾಗಿದ ಟೈಟಾನ್ಸ್ ಸೋಲನ್ನು ಒಪ್ಪಿಕೊಂಡಿತ್ತು.
ಗುರುವಾರ ನಡೆದ 11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 54ನೇ ಪಂದ್ಯದಲ್ಲಿ ಯು ಮುಂಬಾ 35-32 ಅಂತರದಲ್ಲಿ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿದೆ. ಯು ಮುಂಬಾ ಪರ ಮಿಂಚಿನ ರೈಡ್ ಮಾಡಿದ ಮಂಜೀತ್ ಅವರು ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ ಗೆಲುವಿಗಾಗಿ ಹೋರಾಡಿದರು. ಯು ಮುಂಬಾ ಆಡಿರುವ 10 ಪಂದ್ಯಗಳಲ್ಲಿ 6 ಜಯ, 3 ಸೋಲು ಮತ್ತು 1 ಡ್ರಾನೊಂದಿಗೆ 34 ಅಂಕಗಳನ್ನು ಕಲೆ ಹಾಕಿದ್ದು, 2ನೇ ಸ್ಥಾನದಲ್ಲಿದೆ. ಇತ್ತ ತಮಿಳ್ ತಲೈವಾಸ್ ಆಡಿದ 9 ಪಂದ್ಯಗಳಲ್ಲಿ 3 ಗೆಲುವು, 5 ಸೋಲು ಹಾಗು 1 ಡ್ರಾ ಸಾಧಿಸಿದ್ದು, 22 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.