ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಪಾಟ್ನಾ ಪೈರೇಟ್ಸ್ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಪಾಟ್ನಾ ಎಲಿಮಿನೇಟರ್ 2 ಪಂದ್ಯದಲ್ಲಿ 46-37 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿ, ಎಲಿಮಿನೇಟರ್ 3ಗೆ ಅರ್ಹತೆ ಪಡೆದಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್ ತಂಡದ ವಿರುದ್ಧ ಕಾದಾಟವನ್ನು ನಡೆಸಲಿದೆ.
ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಬ್ಬರದ ಅಟವನ್ನು ನಡೆಸುವಲ್ಲಿ ವಿಫಲರಾದರು. ಪಾಟ್ನಾ ಪೈರೇಟ್ಸ್ ತಂಡ ಸ್ಥಿರ ಪ್ರದರ್ಶನ ನೀಡಿತು. ಈ ವೇಳೆ ದಾಳಿಯಲ್ಲಿ ಪಾಟ್ನಾ ಸೊಗಸಾದ ಆಟವನ್ನು ಆಡಿ ಅಬ್ಬರಿಸಿತು. ಈ ವೇಳೆ ಪೈರೇಟ್ಸ್ ದಾಳಿಯಲ್ಲಿ 16, ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಕಲೆ ಹಾಕಿದರು. ಈ ವೇಳೆ ಬುಲ್ಸ್ 2 ಬಾರಿ ಆಲೌಟ್ ಮಾಡಿತು. ಪರಿಣಾಮ ಪಾಟ್ನಾ ಮೊದಲಾವಧಿಯಲ್ಲಿ 27-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಬುಲ್ಸ್ ರಕ್ಷಣಾ ವಿಭಾಗದ ಆಟ ಕೊಂಚ ಮಂಕಾಗಿತ್ತು. ಹೀಗಾಗಿ ಅಂಕಗಳು ಬಾರಲಿಲ್ಲ.

ಎರಡನೇ ಅವಧಿಯ 10ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ತಂಡದ ಶುಭಂ ಬಿಟಕೆ ಅವರು ನಡೆಸಿದ ಅಮೋಘ ದಾಳಿ ನಡೆಸಿ ಅಬ್ಬರಿಸಿದರು. ಇದೇ ಅವಧಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ ಮೊದಲ ಬಾರಿಗೆ ಅಂಗಳವನ್ನು ಖಾಲಿ ಮಾಡಿತು. ಆದರೆ ಈ ವೇಳೆ ಪಾಟ್ನಾ ತಂಡದ ಯೋಜನೆಯನ್ನು ಮೆಟ್ಟಿ ನಿಲ್ಲುವಲ್ಲಿ ಬುಲ್ಸ್ ತಂಡ ವಿಫಲವಾಯಿತು. ಅಲ್ಲದೆ ಪಾಟ್ನಾ ಸಂಘಟಿತ ಆಟದ ಪರಿಣಾಮ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು.
ಟೂರ್ನಿಯಲ್ಲಿ ಅಮೋಘ ಟ್ಯಾಕಲ್ ಮಾಡಿದ್ದ ಬುಲ್ಸ್ ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಪರಿಣಾಮ ಬೆಂಗಳೂರು ಬುಲ್ಸ್ ಅಂಕಗಳನ್ನು ಕಲೆ ಹಾಕುವಲ್ಲ ವಿಫಲವಾಯಿತು. ವಿಜೇತ ತಂಡದ ಪರ ಸ್ಟಾರ್ ರೈಡರ್ ಅಯಾನ್ 19 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.
ಪುಣೇರಿ ಹಾಗೂ ದಬಾಂಗ್ ದೆಹಲಿ ಕೆಸಿ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಗ್ರ ಎರಡೂ ತಂಡಗಳು ಸುಲಭವಾಗಿ ಅಂಕಗಳನ್ನು ನೀಡದೆ ಎದುರಾಳಿಯನ್ನು ಸತಾಯಿಸಿದರು. ಉಭಯ ತಂಡಗಳು ನಿಗದಿತ ಸಮಯದಲ್ಲಿ ತಲಾ 34 ಅಂಕಗಳನ್ನು ಕಲೆ ಹಾಕಿದ್ದರಿಂದ ಫಲಿತಾಂಶವನ್ನು ಅರಿಯಲು ಟೈ ಬ್ರೇಕರ್ ಮೊರೆ ಹೋಗಲಾಯಿತು. ಈ ವೇಳೆ ದಬಾಂಗ್ ದೆಹಲಿ ಕೆಸಿ 6-4 ರಿಂದ ಪುಣೇರಿ ಪಲ್ಟನ್ ವಿರುದ್ಧ ಗೆಲುವು ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಈ ಪಂದ್ಯದಲ್ಲಿ ಸೋತ ಪುಣೇರಿ ಪಲ್ಟನ್ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶವನ್ನು ಪಡೆದಿದೆ. ದಬಾಂಗ್ ದೆಹಲಿ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಪರಾಜಿತ ತಂಡದ ಪರ ಆದಿತ್ಯ ಶಿಂದೆ 10 ಅಂಕವನ್ನು ಸಂಪಾದಿಸಿ ಸೋಲಿನಲ್ಲಿ ಮಿಂಚಿದರು.
ಪುಣೇರಿ ಎರಡನೇ ಕ್ವಾಲಿಫೈಯರ್‌ನಲ್ಲಿ ತೆಲುಗು ಟೈಟಾನ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡದ ವಿರುದ್ಧ ಕಾದಾಟ ನಡೆಸಲಿದೆ.