ಜೈಪೂರ್‌ದಲ್ಲಿ ನಡೆದ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ನಿರಾಸೆ ಅನುಭವಿಸಿದೆ. ಪ್ರೊ ಕಬಡ್ಡಿ ಇತಿಹಾಸದ 1000ನೇ ಪಂದ್ಯದಲ್ಲಿ ಬುಲ್ಸ್ ಗೆಲುವಿನ ಆಸೆ ಕಮರಿದೆ. ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 29-35 ರಿಂದ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ದ ಸೋಲು ಕಂಡಿದೆ.
ಈ ಜಯದ ಮೂಲಕ ಬೆಂಗಾಲ್ ಆಡಿದ 13 ಪಂದ್ಯಗಳಲ್ಲಿ 6 ಜಯ, 5 ಸೋಲು ಕಂಡಿದ್ದು, 2 ಡ್ರಾ ಸಾಧನೆಯೊಂದಿಗೆ 38 ಅಂಕವನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬುಲ್ಸ್ ತಂಡ 13 ಪಂದ್ಯಗಳಲ್ಲಿ ಐದು ಜಯ ದಾಖಲಿಸಿದ್ದು, 32 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಪಂದ್ಯದ ಆರಂಭದಿಂದಲೂ ಬೆಂಗಳೂರು ಬುಲ್ಸ್ ಅಂಕಗಳನ್ನು ಬಾಚಿಕೊಂಡು ಗೆಲುವು ಸಾಧಿಸುವ ಆಸೆಯೊಂದಿಗೆ ಕಣಕ್ಕೆ ಇಳಿಯಿತು. ಆದರೆ ಬುಲ್ಸ್ ತಂಡ ಮಾಡಿಕೊಂಡು ಯೋಜನೆಯನ್ನು ಅರಿತು ಆಡಿದ ಬೆಂಗಾಲ್ ತಂಡ ಅಬ್ಬರಿಸಿತು. ಮೊದಲಾವಧಿಯಲ್ಲಿ ಬೆಂಗಾಲ್ ತಂಡ ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿ ಅಬ್ಬರಿಸಿತು. ಈ ಅವಧಿಯಲ್ಲಿ ಬೆಂಗಳೂರು ತಂಡವನ್ನು ಒಮ್ಮೆ ಆಲೌಟ್ ಮಾಡಿದ ಬೆಂಗಾಲ್ ಬೋನಸ್ ಅಂಕವನ್ನು ಕಲೆ ಹಾಕಿತು.
ಎರಡನೇ ಅವಧಿಯಲ್ಲಿ ಬೆಂಗಳೂರು ಸ್ಥಿರ ಪ್ರದರ್ಶನ ನೀಡಿತು. ಮೊದಲಾವಧಿಯಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಆಡಿದ ಬುಲ್ಸ್ ಅಂಕಗಳ ಬೇಟೆಗೆ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ ಬೆಂಗಳೂರು ತಂಡ 17-16 ಅಂಕಗಳಿಂದ ಮುನ್ನಡೆ ಸಾಧಿಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಸರಿದೂಗಿಸಲು ಈ ಅಂಕಗಳು ಸಾಕಾಗಲಿಲ್ಲ.
ಕೊನೆಯ 20 ನಿಮಿಷದ ಆಟದಲ್ಲಿ ಬೆಂಗಳೂರು ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 5 ಅಂಕ ಪೇರಿಸಿತು. ಅಲ್ಲದೆ ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಆಲೌಟ್ ಆದವು. ಒಟ್ಟಾರೆ ಪಂದ್ಯದಲ್ಲಿ ಉಭಯ ತಂಡಗಳು 44 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 14 ಅಂಕ ಕಲೆ ಹಾಕಿದವು. ಟ್ಯಾಕಲ್‌ನಲ್ಲಿ ಬೆಂಗಾಲ್ 11, ಬುಲ್ಸ್ 9 ಅಂಕ ಪೇರಿಸಿತು.
ಬುಲ್ಸ್ ತಂಡದ ಪರ ಸ್ಟಾರ್ ರೇಡರ್ ಭರತ್ 10 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಬೆಂಗಾಲ್ ತಂಡದ ಪರ ಮನಿಂದರ್ ಸಿಂಗ್ 9 ಅಂಕ ಪೇರಿಸಿದರು.
ಇದಾದ ಬಳಿಕ ನಡೆದ ಇನ್ನೊಂದು ಪಂದ್ಯದಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ ತಂಡ 31-29 ರಿಂದ ಮಾಜಿ ಚಾಂಪಿಯನ್ಸ್ ಯು ಮುಂಬಾ ತಂಡವನ್ನು ಮಣಿಸಿತು. ಈ ಮೂಲಕ ಜೈಪೂರ್ ಆಡಿದ 13 ಪಂದ್ಯಗಳಲ್ಲಿ 9 ಜಯ, 2 ಸೋಲು ಕಂಡಿದ್ದು, 53 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಸೋಲಿನೊಂದಿಗೆ ಮುಂಬಾ 12 ಪಂದ್ಯಗಳಲ್ಲಿ 36 ಅಂಕ ಕಲೆ ಹಾಕಿದ್ದು, ಏಳನೇ ಸ್ಥಾನದಲ್ಲಿದೆ.