ಸ್ಟಾರ್ ರೈಡರ್ ಅರ್ಜನ್ ದೇಶ್ವಾಲ್ ಅವರ ಅಮೋಘ ಆಟದ ನೆರವಿನಿಂದ ಜೈಪೂರ್ ಪಿಂಕ್ ಪ್ಯಾಂಥರ್ಸ್, ಯು-ಮುಂಬಾ ತಂಡವನ್ನು ಮಣಿಸಿತು. ಶನಿವಾರ ನಡೆದ 10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 58ನೇ ಪಂದ್ಯದಲ್ಲಿ ಜೈಪೂರ್ 41-31ರಿಂದ ಯು-ಮುಂಬಾ ತಂಡವನ್ನು ಮಣಿಸಿತು.
ಈ ಮೂಲಕ ಜೈಪೂರ್ ಪಿಂಕ್ ಪ್ಯಾಂಥರ್ಸ್ ಆಡಿದ 10 ಪಂದ್ಯಗಳಲ್ಲಿ, 6 ಜಯ ಸಾಧಿಸಿದ್ದು, 2 ಸೋಲು, 2 ಡ್ರಾ ಕಂಡಿದ್ದು, 38 ಅಂಕಗಳನ್ನು ಹೊಂದಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಸೋಲಿನೊಂದಿಗೆ ಯು-ಮುಂಬಾ 9 ಪಂದ್ಯಗಳಲ್ಲಿ 31 ಅಂಕಗಳನ್ನು ಹೊಂದಿದ್ದು ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಜೈಪೂರ್ ಪಿಂಕ್ ಪ್ಯಾಂಥರ್ಸ್ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದೆ. ಮೊದಲಾವಧಿಯಲ್ಲಿ ಜೈಪೂರ್ ಯೋಜನಾ ಬದ್ಧ ಆಟವನ್ನು ಆಡಿ ಅಬ್ಬರಿಸಿತು. ಈ ಪಂದ್ಯದಲ್ಲಿ ಜೈಪೂರ್ 22-13 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು.
ಈ ವೇಳೆ ಜೈಪೂರ್ ರೈಡರ್‌ಗಳು ಅಬ್ಬರದ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಪಿಂಕ್ ಪ್ಯಾಂಥರ್ಸ್ 16 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಅಲ್ಲದೆ ಒಮ್ಮೆ ಎದುರಾಳಿ ತಂಡವನ್ನು ಆಲೌಟ್ ಮಾಡಿತು.
ಎರಡನೇ ಅವಧಿಯಲ್ಲೂ ತನ್ನ ಮೊದಲಾವಧಿಯ ಆಟದ ಲಯವನ್ನೇ ಮುಂದುವರಿಸಿದ ಜೈಪೂರ್ ಅಬ್ಬರಿಸಿತು. ಈ ಅವಧಿಯಲ್ಲಿ ಜೈಪೂರ್ 19-18 ರಿಂದ ಯುಮುಂಬಾ ತಂಡವನ್ನು ಮಣಿಸಿತು. ಈ ವೇಳೆಯಲ್ಲಿ ಮುಂಬಾ ದಾಳಿಯಲ್ಲಿ ಅಮೋಘ ಆಟದ ಪ್ರದರ್ಶನ ನೀಡಿತು.

ಆದರೆ ಜೈಪೂರ್ ಈ ಅವಧಿಯಲ್ಲಿ ಏಳು ಅಂಕಗಳನ್ನು ಕಲೆ ಹಾಕಿತು. ಅರ್ಜುನ್ ದೇಶ್ವಾಲ್ ವಿಜೇತ ತಂಡದ ಪರ 17 ಅಂಕಗಳನ್ನು ಬಾಚಿಕೊಂಡರು, ಗುಮನ್ 13 ಅಂಕಗಳನ್ನು ಸೇರಿಸಿ ಸೋಲಿನಲ್ಲಿ ಮಿಂಚಿದರು.
ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 37-30 ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಆಡಿದ 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲು ಕಂಡಿದ್ದು 39 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.