ಸಂಘಟಿತ ಆಟದ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ 44-35 ಅಂಕಗಳಿಂದ ಯು ಮುಂಬಾ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ 10ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿತು.
ಪಾಟ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡದ ಎರಡನೇ ಪಂದ್ಯದಲ್ಲಿ ಗುಜರಾತ್ ಸ್ಥಿರ ಆಟದ ಪ್ರದರ್ಶನ ನೀಡಿ ಪೂರ್ಣ ಅಂಕ ಕಲೆ ಹಾಕಿತು. ಈ ಗೆಲುವಿನ ಮೂಲಕ ಗುಜರಾತ್ ಪ್ರಸಕ್ತ ಟೂರ್ನಿಯಲ್ಲಿ ಆರನೇ ಗೆಲುವನ್ನು ದಾಖಲಿಸಿದ್ದು 49 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಇನ್ನು ಮುಂಬಾ ಆಡಿದ 15 ಪಂದ್ಯಗಳಲ್ಲಿ 6 ಗೆಲುವು, 7 ಸೋಲು ಕಂಡಿದ್ದು, 40 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಗುಜರಾತ್ ಪರ ಪ್ರತೀಕ್ ದಹಿಯಾ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಇವರು ಒಟ್ಟು 19 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 8 ಟಚ್ ಪಾಯಿಂಟ್, 3 ಬೋನಸ್ ಪಾಯಿಂಟ್ ಹಾಗೂ 1 ಟ್ಯಾಕಲ್ ಪಾಯಿಂಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಎರಡನೇ ಅವಧಿಯಲ್ಲಿ ಜೈಂಟ್ಸ್ ತಂಡದ ರಕ್ಷಣಾ ವಿಭಾಗದ ಆಟಗಾರರು ಮನಮೋಹಕ ಪ್ರದರ್ಶನ ನೀಡಿದ್ದರ ಬಲದಿಂದ ಜೈಂಟ್ಸ್ ಪೂರ್ಣ ಅಂಕ ಪಡೆಯಲು ಸಾಧ್ಯವಾಯಿತು.
ಮೊದಲಾವಧಿಯಿಂದಲೂ ಗುಜರಾತ್ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಿತ್ತು. ಈ ವೇಳೆ ಜೈಂಟ್ಸ್ 20-17 ಅಂಕಗಳನ್ನು ಕಲೆ ಹಾಕಿತು. ದಾಳಿಯಲ್ಲಿ ಗುಜರಾತ್ ತಂಡದ ಸ್ಟಾರ್ ರೈಡರ್ಸ್ ಒಟ್ಟು 11 ಅಂಕ ಸೇರಿಸಿದರು. ಈ ವೇಳೆ ಗುಜರಾತ್ ಟ್ಯಾಕಲ್‌ನಲ್ಲೂ 5 ಅಂಕ ಸೇರಿಸಿತು. ಅಲ್ಲದೆ ಒಮ್ಮೆ ಮುಂಬಾ ತಂಡವನ್ನು ಆಲೌಟ್ ಮಾಡಿತು.

ಎರಡನೇ ಅವಧಿಯ ಆಟದಲ್ಲಿ ಗುಜರಾತ್ ಪಂದ್ಯದ ಮೇಲೆ ತಾನು ಹಿಡಿದಿದ್ದ ಹಿಡಿತವನ್ನು ಬಿಟ್ಟು ಕೊಡಲಿಲ್ಲ. ಈ ಅವಧಿಯಲ್ಲೂ ಅಬ್ಬರದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿ, ಸುಲಭ ಜಯ ಸಾಧಿಸಿತು. ಈ ವೇಳೆ ಮುಂಬಾ ತಂಡ ದಾಳಿಯಲ್ಲಿ ಕೊಂಚ ಅಂಕವನ್ನು ಹೆಚ್ಚು ಕಲೆ ಹಾಕಿತು. ಆದರೆ ಜೈಂಟ್ಸ್ ತಂಡದ ರಕ್ಷಣಾ ವಿಭಾಗದ ಆಟ ಆಕರ್ಷಕವಾಗಿತ್ತು. ಈ ಅವಧಿಯಲ್ಲಿ ಗುಜರಾತ್ ಬೋನಸ್ ಅಂಕವನ್ನು ಪಡೆಯುವಲ್ಲಿ ಸಫಲವಾಯಿತು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ 44-28 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪಾಟ್ನಾ ಟೂರ್ನಿಯಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು ಏಳಕ್ಕೆ ಏರಿಸಿಕೊಂಡಿತು. ಬೆಂಗಾಲ್ ವಾರಿಯರ್ಸ್ ತಂಡ ಟೂರ್ನಿಯಲ್ಲಿ ಏಳನೇ ಸೋಲನ್ನು ಕಂಡಿತು. ಪಾಟ್ನಾ ಪರ ಸಚಿನ್ ಹಾಗೂ ಮಂಜೀತ್ ಅಮೋಘ ಆಟದ ಪ್ರದರ್ಶನವನ್ನು ನೀಡಿ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ನಿತೀನ್ ಕುಮಾರ್ 10 ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.