
ಚೆನ್ನೈ, ಅಕ್ಟೋಬರ್ 8: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು ಭರ್ಜರಿ 34-22 ಅಂತರದಿಂದ ಸೋಲಿಸಿದೆ. ಭಾನುವಾರ (ಅಕ್ಟೋಬರ್ 7) ರೋಚಕ ಪಂದ್ಯದಲ್ಲಿ ಪುಣೇರಿ ತಂಡ ಯು ಮುಂಬಾ ಎದುರು 32-32ರ ಸಮಬಲ ಸಾಧಿಸಿತ್ತು.
ಸಂದೀಪ್ ನರ್ವಾಲ್ ಮತ್ತು ನಿತಿನ್ ತೋಮರ್ ಅವರ ಆಕರ್ಷಕ ಆಟ ಹರ್ಯಾಣ ಸ್ಟೀಲರ್ಸ್ ಸೋಲಿನ ಬೆಲೆ ತೆರುವಂತೆ ಮಾಡಿತು. ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ಮೋನು ಗೋಯಟ್ ಮತ್ತು ಸುರೇಂದರ್ ನಾಡ ಅವರಿದ್ದ ಹರ್ಯಾಣ ತಂಡ ಪಲ್ಟಾನ್ ಗೆ ತಲೆಬಾಗಲೇ ಬೇಕಾಯಿತು.
ಪಂದ್ಯಾರಂಭದಲ್ಲಿ ಹರ್ಯಾಣವೇ ಮುನ್ನಡೆ ಸಾಧಿಸಿತ್ತು. 3-1, 4-1, 5-4 ಹೀಗೆ ಮುನ್ನಡೆ ಪಡೆದಿದ್ದ ಹರ್ಯಾಣ ಪಂದ್ಯ ಮುಂದುವರೆದಂತೆಲ್ಲ ಹಿನ್ನೆಡೆಯಾಗುತ್ತಾ ಸಾಗಿತು. ನಿತಿನ್ ತೋಮರ್ ಪಂದ್ಯದ ಫಲಿತಾಂಶವನ್ನು ತನ್ನ ತಂಡದತ್ತ ತಿರುಗಿಸಿಕೊಂಡರು.