
ಹೈದರಾಬಾದ್, ಜುಲೈ 21: ಕಳೆದ ಆರು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ತಂಡದ ಸ್ಟಾರ್ ಆಟಗಾರನಾಗಿ ಮಿಂಚಿದ್ದ ರಾಹುಲ್ ಚೌಧರಿ ತಮ್ಮ ಮಾಜಿ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಮಿಳ್ ತಲೈವಾಸ್ ತಂಡಕ್ಕೆ 39-26 ಅಂಕಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ತಮ್ಮ ಮಿಂಚಿನ ರೇಡ್‌ಗಳೊಂದಿಗೆ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರನ್ನು ಪುಳಕಿತರನ್ನಾಗಿಸಿದ ರಾಹುಲ್, ಒಟ್ಟು 15 ಬಾರಿ ದಾಳಿಗಿಳಿದು 10 ಅಂಕಗಳನ್ನು ಗಳಿಸಿ ಸೂಪರ್ ಟೆನ್‌ನೊಂದಿಗೆ ಮಿಂಚಿದರು. ಅಲ್ಲದೆ ಡಿಫೆನ್ಸ್‌ನಲ್ಲೂ 2 ಅಂಕಗಳನ್ನು ಗಳಿಸಿ ಒಟ್ಟು 12 ಅಂಕಗಳೊಂದಿಗೆ ತಲೈವಾಸ್ ಜಯದ ರೂವಾರಿ ಎನಿಸಿದರು.
ಈ ಬಾರಿ ಪ್ರಶಸ್ತಿ ಗೆಲ್ಲುವ ಕಡೆಗೆ ಕಣ್ಣಿಟ್ಟಿರುವ ತಮಿಳ್ ತಲೈವಾಸ್ ತಂಡ ಬಲಿಷ್ಠ ತಂಡವನ್ನೇ ಕಟ್ಟಿದ್ದು, ನಾಯಕ ಅಜಯ್ ಠಾಕುರ್ (4) ಮೇಲಿನ ಅವಲಂಬನೆ ಕಡಿಮೆ ಮಾಡಲು ಸ್ಟಾರ್‌ಗಳ ಬಳಗವನ್ನೇ ಕಟ್ಟಿದೆ. ಅನುಭವಿ ಆಲ್‌ರೌಂಡರ್‌ಗಳಾದ ಮಂಜೀತ್ ಚಿಲ್ಲಾರ್ (6) ಮತ್ತು ಶಬ್ಬೀರ್ ಬಾಪು (3) ತಮ್ಮ ಖದರ್ ಪ್ರದರ್ಶಿಸುವ ಮೂಲಕ ತಂಡ ಶುಭಾರಂಭ ಮಾಡುವಲ್ಲಿ ನೆರವಾದರು. ಪಂದ್ಯದ ಹಾಫ್‌ಟೈಮ್ ಹೊತ್ತಿಗಾಗಲೇ 20-10 ಅಂಕಗಳಿಂದ ತಲೈವಾಸ್ ಪಂದ್ಯದ ಹಿಡಿತ ಕಂಡುಕೊಂಡಿತ್ತು.
ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ಯು ಮುಂಬಾ ತಂಡದ ಪರ ಮಿಂಚಿದ್ದ ಯುವ ರೇಡರ್ ಸಿದ್ಧಾರ್ಥ್ ದೇಸಾಯ್ (5) ಟೈಟನ್ಸ್ ತಂಡದ ಪರ ಅಂಥದ್ದೇ ಪ್ರದರ್ಶನ ನೀಡುವಲ್ಲಿ ಸತತ ಎರಡನೇ ಬಾರಿ ವಿಫಲರಾಗಿದ್ದಾರೆ. ಒಟ್ಟು 13 ಬಾರಿ ದಾಳಿಗಿಳಿದ ಸಿದ್ಧಾರ್ಥ್ ಕೇವಲ 5 ಅಂಕಗಳನ್ನು ಗಳಿಸಲಷ್ಟೇ ಶಕ್ತರಾದರು. ರಜನೀಶ್ ಮತ್ತು ಫರಾದ್ ತಲಾ 4 ಮತ್ತು 3 ಅಂಕಗಳ ಕಾಣಿಕೆ ನೀಡಲಷ್ಟೇ ಶಕ್ತರಾದರು.
ಸೋಮವಾರ ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ (ರಾತ್ರಿ 7.30ಕ್ಕೆ ಆರಂಭ) ಯು ಮುಂಬಾ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಎರಡನೇ ಪಂದ್ಯದಲ್ಲಿ (ರಾತ್ರಿ 8:30ಕ್ಕೆ) ಪುಣೇರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಪೈಪೋಟಿ ನಡೆಸಲಿವೆ.