11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 34ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 36-32 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ. ಈ ಮೂಲಕ ಬುಲ್ಸ್ ಆಡಿದ ಏಳು ಪಂದ್ಯಗಳಲ್ಲಿ 2 ಜಯ ಹಾಗೂ ಐದು ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ. ತಮಿಳು ತಲೈವಾಸ್ ತಂಡ ಟೂರ್ನಿಯಲ್ಲಿ 2ನೇ ಸೋಲು ಕಂಡಿದೆ.
ಬೆಂಗಳೂರಿನ ಅಕ್ಷಿತ್ ಹಾಗೂ ಅಜಿಂಕ್ಯ ಪವಾರ ತಲಾ ಆರು ವಿಕೆಟ್ ಪಡೆದು ಮಿಂಚಿದರು. ರಕ್ಷಣಾ ಆಟಗಾರ ಸುರೇಂದ್ರ ಅಮೋಘ ಆಟದ ಪ್ರದರ್ಶನ ನೀಡಿದರು. ತಮಿಳು ತಂಡದ ಪರ ನರೇಂದ್ರ 6, ಸಚಿನ್ 5 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ಮೊದಲಾವಧಿಯ 20 ನಿಮಿಷದಲ್ಲಿ ಬೆಂಗಳೂರು 14-13 ಅಂಕಗಳನ್ನು ಕಲೆ ಹಾಕಿ ಮುನ್ನಡೆ ಕಾಯ್ದುಕೊಂಡಿತು. ದಾಳಿಯಲ್ಲಿ ಬುಲ್ಸ್ 6 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಸೇರಿಸಿ ಅಂಕದ ಬೇಟೆ ನಡೆಸಿತು.
ಎರಡನೇ ಅವಧಿಯಲ್ಲಿ ಬೆಂಗಳೂರು ಬುಲ್ಸ್ 22-19 ಅಂಕಗಳೊಂದಿಗೆ ತಮಿಳು ತಲೈವಾಸ್ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ದಾಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಲಾ 10 ಅಂಕಗಳನ್ನು ಕಲೆ ಹಾಕಿದರು. ಉಭಯ ತಂಡಗಳು ಇದೇ ಅವಧಿಯಲ್ಲಿ ತಲಾ ಒಂದೊಂದು ಬಾರಿ ಅಂಗಳ ಖಾಲಿ ಮಾಡಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ 49-30 ರಿಂದ ಗುಜರಾತ್ ಟೈಟನ್ಸ್ ವಿರುದ್ಧ ಅಮೋಘ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಪುಣೇರಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಪುಣೇರಿ ಆಡಿದ ಏಳು ಪಂದ್ಯಗಳಲ್ಲಿ ಐದು ಜಯ, 1 ಸೋಲು, 1 ಡ್ರಾ ಸಾಧಿಸಿದ್ದು, 29 ಅಂಕಗಳನ್ನು ಕಲೆ ಹಾಕಿತು.
ಪುಣೇರಿ ಪಲ್ಟನ್ ಮೊದಲಾವಧಿಯಲ್ಲಿ ಅಮೋಘ ಆಟದ ಪ್ರದರ್ಶನವನ್ನು ನೀಡಿ ಅಂಕಗಳ ಬೇಟೆಯಲ್ಲಿ ಭಾರೀ ಮುನ್ನಡೆ ಸಾಧಿಸಿತು. ಈ ಅವಧಿಯ ದಾಳಿಯಲ್ಲಿ ಪುಣೇರಿ 15 ಹಾಗೂ ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಕಲೆ ಹಾಕಿದರೆ, ಆಲೌಟ್‌ನಿಂದ 4 ಅಂಕ ಸೇರಿಸಿತು.
ಎರಡನೇ ಅವಧಿಯ ಆಟದಲ್ಲಿ ಗುಜರಾತ್ ಹಾಕಿಕೊಂಡ ಯೋಜನೆಯಂತೆ ಆಟವನ್ನು ಆಡಿತು. ಈ ವೇಳೆ ಅಂಕದ ಬೇಟೆಯಲ್ಲೂ ಮುನ್ನಡೆ ಸಾಧಿಸಿತು. ಆದರೆ ಮೊದಲಾವಧಿಯಲ್ಲಿ ದಾಖಲಿಸಿದ್ದ ಅಂಕಗಳ ಅಂತರ ಹೆಚ್ಚಾಗಿತ್ತು. ಈ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು.
ವಿಜೇತ ತಂಡದ ಪರ ಆಕಾಶ್ ಶಿಂದೆ 11, ಪಂಕಜ್ ಮೋಹಿತ್ 8 ಅಂಕ ಸೇರಿಸಿದರು. ಪರಾಜಿತ ತಂಡದ ಪರ ಗುಮನ್ ಸಿಂಗ್ 12 ಅಂಕ ಸೆರಿಸಿ ಮಿಂಚಿದರು.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಜೈಪೂರು ಪಿಂಕ್ ಪ್ಯಾಂಥರ್ಸ್, ಯುಪಿ ಯೋಧಾಸ್ ತಂಡವನ್ನು, ಯುಮುಂಬಾ, ದಬಾಂಗ್ ದೆಹಲಿ ತಂಡವನ್ನು ಎದುರಿಸಲಿದೆ.