ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 2024ರ ಮೆಗಾ ಹರಾಜಿನಲ್ಲಿ ಘಟಾನುಘಟಿ ಆಟಗಾರರು ಮಾರಾಟವಾಗದದೆ ಉಳಿದಿರುವುದು ವಿಪರ್ಯಾಸ. ಕಳೆದ ಹಲವು ಆವೃತ್ತಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮನೆಮಾತಾಗಿರುವ ಕೆಲವು ಆಟಗಾರರು ಈ ಬಾರಿ ಪಿಕೆಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
11ನೇ ಆವೃತ್ತಿಗಳಲ್ಲಿ ಯುವ ಆಟಗಾರರು ಭಾರೀ ಮೊತ್ತಕ್ಕೆ ಖರೀದಿಯಾಗಿರುವುದು ಖುಷಿ ವಿಚಾರ. ಆದರೆ, ಈ ಬಾರಿ ದಾಖಲೆ ಸರದಾರರು ಕಬಡ್ಡಿ ಅಂಗಳದಿಂದ ದೂರ ಉಳಿದಿರುವುದು ಬೇಸರದ ಸಂಗತಿಯಾಗಿದೆ. ಈ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಪಿಕೆಎಲ್ ಹರಾಜಿನಲ್ಲಿ ಸ್ಟಾರ್ ರೈಡರ್ ರೋಹಿತ್ ಕುಮಾರ್ ಅವರು ಯಾವುದೇ ತಂಡ ಸೇರದಿರುವುದು ಅಚ್ಚರಿ ಮೂಡಿಸಿದೆ. ಅವರು 101 ಪಂದ್ಯಗಳಿಂದ 730 ಅಂಕಗಳನ್ನು ಹೊಂದಿದ್ದಾರೆ. ಆದರೂ ಈ ಭರವಸೆ ರೈಡರ್‌ನನ್ನು ಬಿಡ್ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿವೆ.
ರೋಹಿತ್ 2016ರಲ್ಲಿ ಪಾಟ್ನಾ ಪೈರೇಟ್ಸ್ ತಂಡ ಪರ ಮೂಲಕ ತಮ್ಮ ಚೊಚ್ಚಲ ಆವೃತ್ತಿಯನ್ನು ಶುರು ಮಾಡಿದ್ದರು. ಈ ಋತುವಿನಲ್ಲಿ 109 ಅಂಕಗಳನ್ನು ಕಲೆ ಹಾಕಿದ್ದರು. ಇದಾದ ಬಳಿಕ ಸತತ
ನಾಲ್ಕು ಋತುಗಳಲ್ಲಿ ಅವರು ಬೆಂಗಳೂರು ಬುಲ್ಸ್ ತಂಡದ ಆಧಾರ ಸ್ತಂಭವಾಗಿದ್ದರು. ಈ ಅವಧಿಯಲ್ಲಿ 602 ಅಂಕಗಳನ್ನು ಗಳಿಸಿ ಅಗ್ರ ರೈಡರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು.
ಪಿಕೆಎಲ್ ಇತಿಹಾಸದಲ್ಲಿ ಅಗ್ರ 10 ಡಿಫೆಂಡರ್‌ಗಳಲ್ಲಿ ಒಬ್ಬರಾದ ಸುರೇಂದರ್ ನಾಡಾ ಈ ಬಾರಿ ಹರಾಜಿನಲ್ಲಿ ಬಿಡ್ ಆಗಿಲ್ಲ. 2016ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಸುರೇಂದರ್ ನಾಡಾ 102 ಪಂದ್ಯಗಳಿಂದ ಒಟ್ಟು 302 ಯಶಸ್ವಿ ಟ್ಯಾಕಲ್ ಅಂಕಗಳನ್ನು ಸಂಗ್ರಹಿಸಿದ್ದಾರೆ. 2022 ರಲ್ಲಿ ಬೆಂಗಾಲ್ ವಾರಿಯರ್ಸ್ ಪರ 10 ಪಂದ್ಯಗಳಿಂದ ಕೇವಲ 11 ಅಂಕಗಳನ್ನು ಪಡೆದಿದ್ದರು.
ಈ ಬಾರಿಯ ಪಿಕೆಎಲ್ ಮೆಗಾ ಹರಾಜಿನಲ್ಲಿ ರಾಹುಲ್ ಚೌಧರಿ ಬಿಕರಿ ಆಗದೆ ಉಳಿದಿದ್ದು, ಆಭಿಮಾನಿಗಳಿಗೆ ನೋವ್ನುಂಟು ಮಾಡಿತ್ತು. ಪಿಕೆಎಲ್ ಪೋಸ್ಟರ್ ಬಾಯ್ ಎಂದೇ ಹೆಸರು ಮಾಡಿದ್ದ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಸಿಗಲಿಲ್ಲ.
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಪರ ರಾಹುಲ್ ಚೌಧರಿ ನಾಲ್ಕು ಪಂದ್ಯಗಳಲ್ಲಿ ಕೇವಲ 6 ಅಂಕಗಳನ್ನು ಪಡೆದಿದ್ದರು. 2022ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಪಿಕೆಎಲ್ ಇತಿಹಾಸದಲ್ಲಿ 1000 ಕ್ಕೂ ಹೆಚ್ಚು ಅಂಕಗಳನ್ನು ಸಂಗ್ರಹಿಸಿರುವ ಕೆಲವೇ ಕೆಲವು ರೈಡರ್‌ಗಳಲ್ಲಿ ಒಬ್ಬರು.
ರೈಡಿಂಗ್ ಆಲ್‌ರೌಂಡರ್ ದೀಪಕ್ ನಿವಾಸ್ ಹೂಡಾ ಅವರು ಕೂಡ ಈ ಬಾರಿ ಪಿಕೆಎಲ್ ಆವೃತ್ತಿಯಿಂದ ದೂರ ಉಳಿದಿದ್ದಾರೆ. ಅವರು ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ ನಾಲ್ಕು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು ಇಲ್ಲಿಯವರೆಗೆ 157 ಪಂದ್ಯಗಳಿಂದ 1119 ಅಂಕಗಳನ್ನು ಗಳಿಸಿದ್ದಾರೆ.
ಇದಲ್ಲದೆ, ದೀಪಕ್ 265 ಟ್ಯಾಕಲ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. 2018 ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ನೊಂದಿಗೆ ಅವರು 22 ಪಂದ್ಯಗಳಿಂದ 208 ಅಂಕಗಳನ್ನು ಕಲೆ ಹಾಕಿದ್ದರು.
2016ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಆಲ್ ರೌಂಡರ್ ದೀಪ್ ನರ್ವಾಲ್ ಅವರು ಕೂಡ ಈ ಬಾರಿ ಕಬಡ್ಡಿ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರು 156 ಪಂದ್ಯಗಳಲ್ಲಿ 645 ರೇಡ್ ಅಂಕಗಳನ್ನು ಮತ್ತು 30 ಸೂಪರ್ ಟ್ಯಾಕಲ್ಸ್ ಮತ್ತು 18 ಹೈ 5 ಗಳನ್ನು ಹೊಂದಿದ್ದಾರೆ. ಅವರು ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ ಆರು ವಿಭಿನ್ನ ಫ್ರಾಂಚೈಸಿಗಳ ಪರ ಆಡಿದ್ದಾರೆ.