10ನೇ ಆವೃತ್ತಿಯ 86ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಪುಣೇರಿ ಪಲ್ಟನ್ ನಡುವಣ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಈ ಪಂದ್ಯದಲ್ಲಿ ಗಳಿಸಿದ ಮೂರು ಅಂಕಗಳ ಸಹಾಯದಿಂದ ಪುಣೇರಿ ಆಡಿದ 14 ಪಂದ್ಯಗಳಲ್ಲಿ 11 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, 60 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಯು ಮುಂಬಾ ತಂಡ ಆಡಿದ 14 ಪಂದ್ಯಗಳಲ್ಲಿ 6 ಜಯ ಹಾಗೂ 6 ಸೋಲು ಕಂಡಿದೆ. ಅಲ್ಲದೆ 2 ಪಂದ್ಯದಲ್ಲಿ ಡ್ರಾ ಸಾಧಿಸಿದ್ದು 40 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಮೊದಲಾವಧಿಯ ಪಂದ್ಯದಲ್ಲಿ ಜಿದ್ದಾಜಿದ್ದಿನ ಆಟ ಕಂಡು ಬಂದಿತು. ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಈ ಅವಧಿಯಲ್ಲಿ ಯು ಮುಂಬಾ ತಂಡ ಎಚ್ಚರಿಕೆಯ ಆಟವನ್ನು ಆಡಿ ಅಂಕಗಳನ್ನು ಕಲೆ ಹಾಕಿ ಕೊಂಚ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಮುಂಬಾ 19-17 ರಿಂದ ಪುಣೇರಿ ವಿರುದ್ಧ ಮುನ್ನಡೆ ಹೊಂದಿತ್ತು. ಈ ಅವಧಿಯಲ್ಲಿ ಯು ಮುಂಬಾ ದಾಳಿಯಲ್ಲಿ 11, ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಪುಣೇರಿ ಒಂದು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯಲ್ಲಿ ಮುಂಬಾ ತಂಡದ ರಣ ತಂತ್ರವನ್ನು ಮೆಟ್ಟಿನಿಂತ ಪುಣೇರಿ ಪಲ್ಟನ್ ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಪುಣೇರಿ 15-13ರಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಸೋಲುವ ಅಂಚಿನಲ್ಲಿದ್ದ ಪಂದ್ಯದಿಂದ ಹೊರ ಬಂದು ಅಂಕಗಳನ್ನು ಹಂಚಿಕೊಳ್ಳುವಲ್ಲಿ ಸಫಲವಾಯಿತು. ಈ ಅವಧಿಯಲ್ಲಿ ಪುಣೇರಿ ದಾಳಿಯಲ್ಲಿ 7 ಅಂಕ ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಕೊಳ್ಳೆ ಹೊಡೆಯಿತು. ಈ ಅವಧಿಯಲ್ಲಿ ಪುಣೇರಿ ಎದುರಾಳಿ ತಂಡವನ್ನು ಒಂದು ಬಾರಿ ಆಲೌಟ್ ಮಾಡಿ ಬೋನಸ್ ಅಂಕವನ್ನು ಸಹ ಕಲೆ ಹಾಕಿತು.
ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 41 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿದವು. ಇದರಲ್ಲಿ ಮುಂಬಾ 17 ಹಾಗೂ ಪುಣೇರಿ 15 ಅಂಕಗಳನ್ನು ಸೇರಿಸಿತು. ಇನ್ನು ಪುಣೇರಿ 23 ಬಾರಿ ಎದುರಾಳಿ ರೈಡರ್ ಹಿಡಿಯಲು ಮುಂದಾಗಿ 11 ಅಂಕಗಳನ್ನು ಕಲೆ ಹಾಕಿತು. ಮುಂಬಾ ಟ್ಯಾಕಲ್‌ನಲ್ಲಿ 9 ಅಂಕ ಸೇರಿಸಿತು.

ಪುಣೇರಿ ಪರ ಅಸ್ಲಂ ಮುಸ್ತಫ್ 8, ಮೋಹಿತ್ ಗೊಯತ್ 7 ಅಂಕಗಳನ್ನು ಸೇರಿಸಿದರು. ಮುಂಬಾ ಪರ ಗುನಮ್ 15 ಅಂಕ ಕಲೆ ಹಾಕಿ ಮಿಂಚಿದರು.