ಸ್ಟಾರ್ ಆಟಗಾರ ಅಜಿಂಕ್ಯ ಪವಾರ್ ಹಾಗೂ ಎಂ ಅಭಿಷೇಕ್ ಅವರ ಸಮಯೋಚಿತ ಆಟದ ನೆರವಿನಿಂದ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 75ನೇ ಪಂದ್ಯದಲ್ಲಿ ತಮಿಳು ತಲೈವಾಸ್ 41-25 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ನಾಲ್ಕನೇ ಗೆಲುವಿನ ನಗೆ ಬೀರಿದೆ.
ಈ ಜಯದ ಮೂಲಕ ತಮಿಳು ತಲೈವಾಸ್ ಆಡಿದ 13 ಪಂದ್ಯಗಳಲ್ಲಿ 4 ಜಯ, 9 ಸೋಲು ಕಂಡಿದ್ದು, 25 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ಸೋಲಿನ ನಂತರ ಪಾಟ್ನಾ ಆಡಿದ 13 ಪಂದ್ಯಗಳಲ್ಲಿ 5 ಜಯ, 7 ಸೋಲು, 1 ಡ್ರಾ ಸಾಧಿಸಿದ್ದು, 32 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಮೊದಲಾವಧಿಯಲ 20 ನಿಮಿಷದಲ್ಲಿ ತಲೈವಾಸ್ ತಂಡ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಅಂಕಗಳನ್ನು ಬಾಚಿಕೊಂಡು ಅಬ್ಬರಿಸಿತು. ಈ ಅವಧಿಯಲ್ಲಿ ತಲೈವಾಸ್ ತಂಡದ ಡಿಫೆಂಡರ್‌ಗಳು ಮನಮೋಹಕ ರಕ್ಷಣಾ ಆಟದ ಪ್ರದರ್ಶನ ನೀಡಿದರು. ದಾಳಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟವನ್ನು ನಡೆಸಿದವು. ಪಾಟ್ನಾ ತಂಡವನ್ನು ತಲೈವಾಸ್ ಒಮ್ಮೆ ಆಲೌಟ್ ಮಾಡುವ ಮೂಲಕ ಎರಡು ಅಂಕವನ್ನು ಕಲೆ ಹಾಕಿತು. ಪರಿಣಾಮ ಈ ಅವಧಿಯಲ್ಲಿ ತಲೈವಾಸ್ 20-11 ಅಂಕಗಳಿಂದ ಮುನ್ನಡೆ ಸಾಧಿಸಿತು.
ಮೊದಲಾವಧಿಯಲ್ಲಿ ಸಾಧಿಸಿದ್ದ 9 ಅಂಕಗಳ ಹಿನ್ನಡೆಯನ್ನು ಮೆಟ್ಟಿನಿಂತು ತಲೈವಾಸ್ ತಂಡಕ್ಕೆ ಖೆಡ್ಡಾ ತೋಡುವ ಪಾಟ್ನಾ ಕನಸು ನನಸಾಗಲಿಲ್ಲ. ತಲೈವಾಸ್ ಈ ಅವಧಿಯಲ್ಲೂ ಅಬ್ಬರದ ಆಟವನ್ನು ಆಡಿ ಗಮನ ಸೆಳೆಯಿತು. ತಲೈವಾಸ್ ಈ ಅವಧಿಯಲ್ಲಿ 21-14 ಅಂಕಗಳಿಂದ ಮುನ್ನಡೆ ಸಾಧಿಸಿ ಸುಲಭ ಜಯ ದಾಖಲಿಸಿತು. ಈ ಅವಧಿಯಲ್ಲಿ ತಲೈವಾಸ್ ತಂಡ ದಾಳಿಯಲ್ಲಿ 8 ಹಾಗೂ ಟ್ಯಾಕಲ್ ಮೂಲಕ 11 ಅಂಕವನ್ನು ಬಾಚಿಕೊಂಡಿತು. ಈ ಅವಧಿಯಲ್ಲೂ ತಲೈವಾಸ್ ಎದುರಾಳಿ ತಂಡದ ಅಂಗಳವನ್ನು ಖಾಲಿ ಮಾಡಿ ಬೋನಸ್ ಅಂಕ ಕಲೆ ಹಾಕಿತು.
ತಮಿಳು ತಲೈವಾಸ್ ಪರ ಅಜಿಂಕ್ಯ ಪವಾರ ಒಟ್ಟು 19 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಟಚ್ ಪಾಯಿಂಟ್ ಗಳಿಸಿದರು. ರೈಟ್ ಕಾರ್ನರ್ ಡಿಫೆಂಡರ್ ಅಭಿಷೇಕ್ ಏಳು ಅಂಕ ಸಂಪಾದಿಸಿ ಗೆಲುವಿನಲ್ಲಿ ಮಿಂಚಿದರು. ಪಾಟ್ನಾ ಪರ ಸುಧಾಕರ್ ಎಂಟು ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.