ದೆಹಲಿ: ಕೊನೆಯ ನಿಮಿಷದಲ್ಲಿ ಆದಿತ್ಯ ಶಿಂಧೆ ಮಾಡಿದ ಸೂಪರ್ ರೈಡ್ ಪ್ರಭಾವದಿಂದ ಪುಣೇರಿ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರಿಸಿದೆ. 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 50-45 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿ, ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಮೂಲಕ ಪುಣೇರಿ ಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಮೊದಲಾವಧಿಯ ಪಂದ್ಯದಲ್ಲಿ ಪುಣೇರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಈ ಅವಧಿಯ ನಾಲ್ಕನೇ ನಿಮಿಷದಲ್ಲಿ ಪುಣೇರಿ ಆಲೌಟ್ ಆಯಿತು. ಈ ಅವಧಿಯಲ್ಲಿ ತೆಲುಗು 17 ಅಂಕಗಳನ್ನು ಕಲೆ ಹಾಕಿ ಬೀಗಿತು. ಅಲ್ಲದೆ 5 ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಈ ಅವಧಿಯಲ್ಲಿ ತೆಲುಗು ಸಹ ಒಮ್ಮೆ ಆಲೌಟ್ ಆಯಿತು. ಪರಿಣಾಮ ಎರಡನೇ ಕ್ವಾಲಿಫೈಯರ್‌ನ ಎರಡನೇ ಅವಧಿಯ ಪಂದ್ಯ ರೋಚಕತೆ ಹುಟ್ಟಿಸಿತ್ತು. ಈ ಅವಧಿಯಲ್ಲಿ ತೆಲುಗು 24-20 ಅಂಕಗಳಿಂದ ಮುನ್ನಡೆ ಸಾಧಿಸಿತು.

ಇನ್ನು ಎರಡನೇ ಅವಧಿಯ ಆಟದಲ್ಲಿ ಪುಣೇರಿ, ತೆಲುಗು ತಂಡದ ನ್ಯೂನತೆಯನ್ನು ಮೆಟ್ಟಿನಿಂತು ಅಬ್ಬರಿಸಿತು. ಈ ಅವಧಿಯಲ್ಲಿ ಉಭಯ ತಂಡಗಳ ಆಟ ಮನಮೋಹಕವಾಗಿತ್ತು. ಅಲ್ಲದೆ ದಾಳಿಯಲ್ಲಿ ಎರಡೂ ತಂಡಗಳು ಸಮಬಲದ ಆಟ ಪ್ರದರ್ಶಿಸಿತು. ಆದರೆ ಪುಣೇರಿ ಟ್ಯಾಕಲ್‌ನಲ್ಲಿ ಕ್ಲಾಸಿಕ್ ಆಟವನ್ನು ಆಡಿತು. ಈ ಅವಧಿಯ ಆಟದಲ್ಲಿ ಪುಣೇರಿ ಮೂರು ಬಾರಿ ಎದುರಾಳಿ ತಂಡವನ್ನು ಖಾಲಿ ಮಾಡಿತು. ಎರಡನೇ ಅವಧಿಯ 17ನೇ ನಿಮಿಷದಲ್ಲಿ ಆದಿತ್ಯ ಶಿಂಧೆ 5 ಅಂಕವನ್ನು ಕಲೆ ಹಾಕಿ ಪಂದ್ಯವನ್ನು ತನ್ನತ್ತ ವಾಲಿಸಿಕೊಳ್ಳಲು ಸಫಲರಾದರು.
ಪುಣೇರಿ ತಂಡದ ಸ್ಟಾರ್ ರೈಡರ್ ಆದಿತ್ಯ ಶಿಂಧೆ 20 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 22 ಅಂಕವನ್ನು ಕಲೆ ಹಾಕಿದರು. ಉಳಿದಂತೆ ಪಂಕಜ್ ಮೋಹಿತೆ 10 ಅಂಕವನ್ನು ಸೇರಿಸಿತು. ಆಲ್‌ರೌಂಡರ್ ಭರತ್ 23 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಶುಕ್ರವಾರ ನಡೆಯುವ ಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ ಹಾಗೂ ಪುಣೇರಿ ತಂಡಗಳು ಕಾದಟ ನಡೆಸಲಿವೆ. ಉಭಯ ತಂಡಗಳು ತಮ್ಮ ಎರಡನೇ ಪ್ರಶಸ್ತಿಗಾಗಿ ಹುಡುಕಾಟ ನಡೆಸಲಿವೆ.