ಮೊದಲ ಏಷ್ಯನ್ ಗೇಮ್ಸ್ 1951ರಲ್ಲಿ ಭಾರತದ ದೆಹಲಿಯಲ್ಲಿ ಆಯೋಜನೆಯಾಗಿತ್ತು. 1951ರ ಮಾರ್ಚ್ 4ರಂದು ಆರಂಭವಾದ ಈ ಕ್ರೀಡಾಕೂಟ 11ರಂದು ತೆರೆಕಂಡಿತ್ತು. ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳನ್ನು (ಎನ್‌ಒಸಿ) ಪ್ರತಿನಿಧಿಸುವ 11 ದೇಶಗಳ ಒಟ್ಟು 489 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಎಂಟು ಕ್ರೀಡೆಗಳ 57 ಸ್ಪರ್ಧೆಗಳಲ್ಲಿ ಈ ಕ್ರೀಡಾಪಟುಗಳು ಪದಕಕ್ಕಾಗಿ ಸೆಣೆಸಾಟ ನಡೆಸಿದ್ದರು.
1949ರ ಫೆಬ್ರವರಿ 13ರಂದು ಅಧಿಕರತವಾಗಿ ಏಷ್ಯನ್ ಗೇಮ್ಸ್ ಫೆಡರೇಶನ್‌ಅನ್ನು ದೆಹಲಿಯಲ್ಲಿ ಸ್ಥಾಪಿಸಲಾಯಿತು. ಇದೇ ಸಂದರ್ಭದಲ್ಲಿ ದೆಹಲಿಯನ್ನು ಸರ್ವಾನುಮತದಿಂದ ಮೊದಲ ಆಆತಿರ್ಥಯದ ನಗರ ಎಂದು ಘೋಷಿಸಲಾಯಿತು. ಅಂದಹಾಗೆ ನಿಗದಿಯ ಪ್ರಕಾರ ಮೊದಲ ಏಷ್ಯನ್ ಗೇಮ್ಸ್ 1950ರಲ್ಲಿ ಆಯೋಜನೆಯಾಗಬೇಕಾಗಿತ್ತು. ಆದರೆ ಸಿದ್ಧತೆಯಲ್ಲಿ ವಿಳಂಬವಾದ ಕಾರಣದಿಂದಾಗಿ ನಂತರ ಅದು 1951ರಲ್ಲಿ ಆಯೋಜನೆ ಮಾಡಲಾಯಿತು.

ಇನ್ನು ಮೊದಲ ಏಷ್ಯನ್ ಗೇಮ್ಸ್‌ನಲ್ಲಿ 11 ರಾಷ್ಟ್ರಗಳು ಭಾಗಿಯಾಗಿತ್ತು. ಭಾರತದ ಅಂದಿನ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್ ಈ ಕ್ರೀಡಾಕೂಟದ ಉದ್ಘಾಟನೆ ಮಾಡಿದ್ದರು. ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣ ಈ ಕ್ರೀಡಾಕೂಡದ ಮುಖ್ಯ ತಾಣವಾಗುತ್ತು. ಬಲ್‌ದೇವ್ ಸಿಂಗ್ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರೆ ದಿಲಿಪ್ ಸಿಂಗ್ ಕ್ರೀಡಾಜ್ಯೋತಿ ಬೆಳಗಿಸಿದ್ದರು.
ಇನ್ನು ಈ ಕ್ರೀಡಾಕೂಡದಲ್ಲಿ ಜಪಾನ್ 24 ಚಿನ್ನದ ಪದಕ, 21 ಬೆಳ್ಳಿ ಪದಕ ಹಾಗೂ 15 ಕಂಚಿನ ಪದಕ ಗೆದ್ದು ಕ್ರೀಡಾಕೂಟದದಲ್ಲಿ ಅತಿ ಹೆಚ್ಚಿನ ಪದಕ ಗೆದ್ದ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಎರಡನೇ ಸ್ಥಾನವನ್ನು ಭಾರತ ಪಡೆದುಕೊಂಡಿದ್ದು 15 ಚಿನ್ನದ ಪದಕ, 16 ಬೆಳ್ಳಿ ಹಾಗೂ 20 ಕಂಚಿನ ಪದಕ ಗೆದ್ದುಕೊಂಡಿತ್ತು. ಆ ಕ್ರೀಡಾಕೂಟದಲ್ಲಿ ಭಾರತ ಒಟ್ಟು 51 ಪದಕಗಳನ್ನು ಗೆದ್ದುಕೊಂಡಿತ್ತು ಎಂಬುದು ಗಮನಾರ್ಹ.
ಈ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಸಚಿನ್ ನಾಗ್ ಪುರುಷರ 100 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಚೊಚ್ಚಲ ಪದಕ ಗೆದ್ದ ಸಾಧನೆ ಮಾಡುವ ಮೂಲಕ ಶುಭಾರಂಭ ಮಾಡಿದ್ದರು. ಲವಿನೋ ಥೋಮಸ್ ಪಿಂಟೋ ಮತ್ತು ಕೆ.ಪಿ ಠಕ್ಕರ್ ಈ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ತಲಾ ಎರಡು ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳು ಎನಿಸಿಕೊಂಡಿದ್ದರು. ಲವಿನೋ ಥೋಮಸ್ ಪಿಂಟೋ ಪುರುಷರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮತ್ತು 200 ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರೆ ಕೆಪಿ ಠಕ್ಕರ್ ಡೈವಿಂಗ್‌ನ ಎರಡು ವಿಭಾಗದಲ್ಲಿ ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು