
ನಾಲ್ಕು ಬಾರಿಯ ಫಾರ್ಮುಲಾ 1 ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ. 2022ರ ಋತುವಿನ ಅಂತ್ಯದಲ್ಲಿ ತಾನು ನಿವೃತ್ತಿಯನ್ನು ಹೊಂದುವುದಾಗಿ ವೆಟ್ಟಲ್ ಗುರುವಾರ ಘೋಷಣೆ ಮಾಡಿದ್ದಾರೆ. 35ರ ಹರೆಯದ ಜರ್ಮನಿ ಮೂಲದ ಸೆಬಾಸ್ಟಿಯನ್ ವೆಟಲ್ 2010ರಿಂದ 2013ರ ವರೆಗೆ ಸತತ ನಾಲ್ಕು ಟೈಟಲ್‌ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಸೆಬಾಸ್ಟಿಯನ್ ವೆಟಲ್ ಒಟ್ಟು 53 ಗ್ರ್ಯಾಂಡ್‌ಪ್ರಿಕ್ಸ್‌ಗಳಲ್ಲಿ ಗೆಲುವು ಸಾಧಿಸಿದ್ದು ಸಾರ್ವಕಾಲಿಕ ವಿಜೇತರ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 103 ಗೆಲುವು ಸಾಧಿಸಿರುವ ಲೂಯೀಸ್ ಹ್ಯಾಮಿಲ್ಟನ್ ಮೊದಲ ಸ್ಥಾನದಲ್ಲಿದ್ದರೆ ಮೈಕಲ್ ಶುಮಾಕರ್ 91 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
15 ವರ್ಷಗಳ ಕಾಲ ಫಾರ್ಮುಲಾ 1 ನಲ್ಲಿ ಮಿಂಚಿರುವ ಸೆಬಾಸ್ಟಿಯನ್ ವೆಟಲ್ ಗುರುವಾರ ತಮ್ಮ ನಿವೃತ್ತಿಯ ಬಗ್ಗೆ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಈ ಪ್ರಯಾಣದಲ್ಲಿ ಜೊತೆಯಾದವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಇನ್ನು ಈ ಫಾರ್ಮುಲಾ 1 ಸ್ಪರ್ಧೆಯಲ್ಲಿ ತಾನು ಸಾಕಷ್ಟು ಆನಂದವನ್ನು ಪಡೆದಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾರೆ.
"ಕಳೆದ 15 ವರ್ಷಗಳಲ್ಲಿ ಫಾರ್ಮುಲಾ 1ನಲ್ಲಿ ಅನೇಕ ಅದ್ಭುತ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಈ ಸಂದರ್ಭದಲ್ಲಿ ನಾನು ಧನ್ಯವಾದವನ್ನು ಸಲ್ಲಿಸಬೇಕಿರುವ ಜನರ ದೊಡ್ಡ ಪಟ್ಟಿಯೇ ಇದೆ" ಎಂದು ವೆಟಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು "ಕಳೆದ ಎರಡು ವರ್ಷಗಳಲ್ಲಿ ನಾನು ಆಸ್ಟನ್ ಮಾರ್ಟಿನ್ ಡ್ರೈವರ್ ಆಗಿದ್ದೇನೆ. ನಮ್ಮ ಫಲಿತಾಂಶ ನಾವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ ಬಂದಿಲ್ಲ. ಆದರೆ ತಂಡ ಅತ್ಯುನ್ನತ ಸ್ಪರ್ಧೆಗೆ ಅಗತ್ಯವಿರುವ ಎಲ್ಲವನ್ನೂ ಒಗ್ಗೂಡಿಸುತ್ತಿದೆ ಎಂಬುದು ಸ್ಪಷ್ಟವಿದೆ. ಮುಂಬರುವ ವರ್ಷಗಳಲ್ಲಿ ನಾವಂದುಕೊಂಡಿರುವುದು ಸಾಧಿಸಲು ಸಾಧ್ಯವಾಗಲಿದೆ" ಎಂದಿದ್ದಾರೆ ಸೆಬಾಸ್ಟಿಯನ್ ವೆಟಲ್.
"ಕಳೆದ ವರ್ಷ ಮತ್ತು ಈ ವರ್ಷ ನಾನು ಮಾಡುತ್ತಿರುವ ಕಾರ್ಯ ಭವಿಷ್ಯದಲ್ಲಿ ತಂಡದ ಗೆಲುವಿಗೆ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಈ ನನ್ನ ಅಂತಿಮ ಋತುವಿನಲ್ಲಿ ಗೆಲುವಿಗಾಗಿ ಸಾಕಷ್ಟು ಶ್ರಮಿಸಲಿದ್ದೇನೆ. ಕೊನೆಯ 10 ರೇಸ್‌ಗಳಲ್ಲಿ ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇನೆ" ಎಂದಿದ್ದಾರೆ ಸೆಬಾಸ್ಟಿಯನ್ ವೆಟಲ್.
"ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ನನ ಬಹಳಷ್ಟುಗೆ ಕಷ್ಟಕರ ಸಂಗತಿಯಾಗಿದೆ. ಈ ಬಗ್ಗೆ ಸಾಕಷ್ಟಿ ಯೋಚಿಸಿದ ಬಳಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ಋತುವಿನ ಅಂತ್ಯದಲ್ಲಿ ಮುಂದೆ ಯಾವ ವಿಚಾರವಾಗಿ ಗಮನಹರಿಸಬೇಕು ಎಂಬುದನ್ನು ನಿರ್ಧರಿಸಲಿದ್ದೇನೆ. ತಂದೆಯಾಗಿ ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಾನು ಬಯಸುತ್ತೇನೆ" ಎಂದಿದ್ದಾರೆ ಹಿರಿಯ ಫಾರ್ಮುಲಾ 1 ಡ್ರೈವರ್ ಸೆಬಾಸ್ಟಿಯನ್ ವೆಟಲ್.