ಪ್ಯಾರಿಸ್: ಕೆಲವೇ ದಿನಗಳ ಹಿಂದೆ 2024ರ ಒಲಿಂಪಿಕ್ಸ್ ಮುಕ್ತಾಯಗೊಂಡಿದೆ. ಬುಧವಾರದಿಂದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಆಯೋಜಿಸಲು ಪ್ಯಾರಿಸ್ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಭಾರತ ತಂಡ ಸಹ ಪ್ರಯಾಣ ಬೆಳೆಸಿದೆ.
ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ಈ ಸಾಧನೆಯನ್ನು ಮೀರಿ ನಿಲ್ಲುವ ಕನಸು ಆಟಗಾರರಾದ್ದಾಗಿದೆ. ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಪ್ಯಾರಾಲಿಂಪಕ್ಸ್ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಆಯೋಜಿಸಲಾಗುತ್ತದೆ. 1992ರಲ್ಲಿ ಟಿಗ್ನೆಸ್ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳಲ್ಲಿ ಈ ಕ್ರೀಡಾ ಕೂಟ ನಡೆದಿತ್ತು. ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್ ಆಯೋಜಿಸುವ ನಗರವೇ ಪ್ಯಾರಾಲಿಂಪಿಕ್ಸ್‌ಗೂ ಆತಿಥ್ಯ ವಹಿಸಬೇಕು. ಹೀಗಾಗಿ, ಪ್ಯಾರಿಸ್ ನಗರಕ್ಕೆ ಒಲಿಂಪಿಕ್ಸ್ ಆತಿಥ್ಯ ಹಕ್ಕು ಸಿಕ್ಕಾಗಲೇ ಪ್ಯಾರಾಲಿಂಪಿಕ್ಸ್‌ನ ಆತಿಥ್ಯ ಹಕ್ಕು ಸಹ ದೊರೆತಿತ್ತು.
ಈಗಾಗಲೇ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕವನ್ನು ಬಾಚಿಕೊಂಡಿದೆ. ಇನ್ನು ಎಲ್ಲರ ಚಿತ್ತ ಪ್ಯಾರಾಲಿಂಪಿಕ್ಸ್‌ನತ್ತ ನೆಡಲಿದೆ. ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದು ಭಾರತದ ಮಟ್ಟಿಗೆ ದಾಖಲೆ ಎನಿಸಿದೆ. ಟೊಕಿಯೋ ಒಲಿಂಪಿಕ್ಸ್‌ಗೆ ಭಾರತ ಒಟ್ಟು 54 ಅಥ್ಲೀಟ್‌ಗಳ ತಂಡವನ್ನು ಕಳುಹಿಸಿತ್ತು. 1984ರಿಂದ ನಡೆದ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.
ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, ಅಥ್ಲೇಟಿಕ್ಸ್‌ನಲ್ಲಿ 38 ಕ್ರೀಡಾಪಟುಗಳ ಅಂಗಳ ಪ್ರವೇಶಿಸಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಎರಡೂ ಕೈಗಳಿಲ್ಲದಿದ್ದರೂ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಶೀತಲ್ ದೇವಿ ಭಾರತದ ಅತಿದೊಡ್ಡ ಪದಕ ಭರವಸೆ ಎನಿಸಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಕ್ರೀಡಾಪಟುಗಳನ್ನು 12 ಕ್ರೀಡೆಗಳಲ್ಲಿ ಕಣಕ್ಕಿಳಿಸುತ್ತಿದೆ. ಈ ಬಾರಿ ಕನಿಷ್ಠ 25ರಿಂದ 30 ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಿದೆ ಎಂದು ಪಿಸಿಐನ ಪ್ರಧಾನ ಕೋಚ್ ಆಗಿರುವ ಕರ್ನಾಟಕದ ಸತ್ಯನಾರಾಯಣ ತಿಳಿಸಿದ್ದಾರೆ.