ಆಗಸ್ಟ್ 10 ಶುಕ್ರವಾರ, ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಅಮನ್ ಸೆಹ್ರಾವತ್ ಭಾರತಕ್ಕೆ ಆರನೇ ಪದಕವನ್ನು ನೀಡಿದರು. ಕಂಚಿನ ಪದಕದ ಹೋರಾಟದಲ್ಲಿ ಅಮನ್ ಅವರು ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದರು.
ಇದಾದ ನಂತರ ಪ್ಯಾರಿಸ್‌ನಲ್ಲಿ ಇತಿಹಾಸ ನಿರ್ಮಿಸಿದ ಅಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ಮಾತನಾಡಿ ಅವರನ್ನು ಅಭಿನಂದಿಸಿದರು. ಅಮಾನ್ ಅವರೊಂದಿಗೆ ಮಾತನಾಡುತ್ತಾ, ಅವರ ಅತ್ಯುತ್ತಮ ಪ್ರಯತ್ನಗಳಿಂದ ದೇಶಕ್ಕೆ ಪದಕವನ್ನು ಗೆದ್ದಿದ್ದಕ್ಕಾಗಿ ಪ್ರಧಾನಿ ಮೋದಿ ಶ್ಲಾಘಿಸಿದರು.

'ನೀವು ಕ್ರೀಡಾಂಗಣವನ್ನು ನಿಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದೀರಿ, ಎಲ್ಲರೂ ಇದನ್ನು ಮಾಡಲು ಸಾಧ್ಯವಿಲ್ಲ ನೀವು ಚಿಕ್ಕ ವಯಸ್ಸಿನಲ್ಲೇ ನಿಮ್ಮ ಹೆತ್ತವರನ್ನು ಕಳೆದುಕೊಂಡಿದ್ದೀರಿ. ನಂತರ ನೀವು ತುಂಬಾ ಕಷ್ಟಪಟ್ಟು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕವನ್ನು ತಂದುಕೊಟ್ಟಿದ್ದೀರಿ. ಇದು ಇಡೀ ದೇಶವಾಸಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅಮನ್ ಹೋರಾಟಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಮನ್ ಶಪಥ ಮಾಡಿದ್ದಾರೆ. ಈ ಶಪಥ ಕೇಳಿದ ಪ್ರತಿಯೊಬ್ಬರಿಗೂ ರೋಮಚನವಾಗಲಿದೆ. ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನನ್ನ ಶಕ್ತಿಮೀರಿ ಪ್ರಯತ್ನಿಸಿದರೂ ಆಗಲಿಲ್ಲ. ಆದರೆ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಡುತ್ತೇನೆ ಎಂದು ಮೋದಿಗೆ ಅಮನ್ ಬಂಗಾರದ ಭರವಸೆ ನೀಡಿದ್ದಾರೆ.
ಇದಲ್ಲದೆ, ಈ ಸಂವಾದದ ವೇಳೆ ಅಮನ್ ಅವರು ಪ್ರಧಾನಿಯವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದ 21 ವರ್ಷದ ಕುಸ್ತಿಪಟು ರಾಷ್ಟ್ರೀಯ ಟ್ರಯಲ್ ಸಂದರ್ಭದಲ್ಲಿ 2020ರ ಟೋಕಿಯೋ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಮತ್ತು ಅವರ ಮಾರ್ಗದರ್ಶಕ ರವಿ ದಹಿಯಾ ಅವರನ್ನು ಸೋಲಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದಿದ್ದರು.
ಪುರುಷರ 57 ಕೆಜಿ ಕುಸ್ತಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮನ್ ಅವರು 10-0 ಅಂತರದಲ್ಲಿ ಮಾಜಿ ಯುರೋಪಿಯನ್ ಚಾಂಪಿಯನ್ ಮ್ಯಾಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಸೋಲಿಸಿದರು.
ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಬೇನಿಯಾದ ಮಾಜಿ ವಿಶ್ವ ಚಾಂಪಿಯನ್ ಮತ್ತು ನಾಲ್ಕನೇ ಶ್ರೇಯಾಂಕದ ಝೆಲಿಮ್ಖಾನ್ ಅಬಕರೋವ್ ಅವರನ್ನು 12-0 ಅಂತರದಿಂದ ಅಮನ್ ಸುಲಭ ಜಯ ಸಾಧಿಸಿದರು. ಕೊನೆಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಅವರು 10-0 ರಿಂದ ಜಪಾನ್‌ನ ರೇ ಹಿಗುಚಿ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಕಂಚಿನ ಪದಕಕ್ಕೆ ಹೋರಾಟ ನಡೆಸಬೇಕಾಯಿತು.