
ಜಕಾರ್ತಾ, ಆಗಸ್ಟ್ 25: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳಾ 400 ಮೀ. ಓಟ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಹಿಮಾ ದಾಸ್ ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 25ರ ಶನಿವಾರ ನಡೆದ ಮಹಿಳಾ 400 ಮೀ. ಸೆಮಿಫೈನಲ್ ನಲ್ಲಿ 51 ಸೆಕೆಂಡ್ ಗಳಲ್ಲಿ ಓಟ ಮುಗಿಸುವುದರೊಂದಿಗೆ ಹಿಮಾ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡರು. ದಾಸ್ ಓಡಿರುವ ಈ (51 ಸೆ.) ಕಾಲಾವಧಿ ರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಹೊಸ ದಾಖಲೆಯಾಗಿದೆ. ಭಾರತದ ಮತ್ತೊಬ್ಬ 400 ಮೀ. ಓಟಗಾರ್ತಿ ನಿರ್ಮಲಾ ಅವರೂ ಫೈನಲ್ ಪ್ರವೇಶಿದ್ದಾರೆ. ನಿರ್ಮಲಾ 54.09 ಕಾಲಾವಧಿಯ ಸಾಧನೆ ತೋರಿದರು.
ಮಹಿಳಾ ಹಾಕಿ ಪಂದ್ಯದಲ್ಲಿ ಭಾರತ ತಂಡ ಕೊರಿಯಾವನ್ನು ಸೋಲಿಸುವ ಮೂಲಕ ಮುನ್ನಡೆ ಸಾಧಿಸಿದೆ. ಶನಿವಾರ ನಡೆದ ಪೂಲ್ ಬಿಯ ಪಂದ್ಯದಲ್ಲಿ ಭಾರತ, ಕೊರಿಯಾವನ್ನು 4-1ರಿಂದ ಹಿಮ್ಮೆಟ್ಟಿಸಿತು. ಶಾಟ್ ಪುಟ್ ನಲ್ಲಿ ಭಾರತದ ತೇಜೀಂದರ್ ಪಾಲ್ ಸಿಂಗ್ ಏಷ್ಯಾನ್ ಗೇಮ್ಸ್ ಕೂಟ ದಾಖಲೆ ಮತ್ತು ರಾಷ್ಟ್ರೀಯ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನ ಜಯಿಸಿದ್ದು, ನಾಳೆ ಅಥ್ಲೆಟಿಕ್ಸ್ ನಲ್ಲಿ ಇನ್ನಷ್ಟು ಪದಕ ಲಭಿಸುವ ನಿರೀಕ್ಷೆಯಿದೆ.