
ಜಕಾರ್ತಾ, ಆಗಸ್ಟ್ 30: ಮತ್ತೊಂದು ಚಿನ್ನದ ಪದಕ ಭಾರತದ ಪಾಲಾಗಿದೆ. ಮಹಿಳಾ 4x400 ಮೀ. ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಚಿನ್ನ ಜಯಿಸಿದೆ. ಆಗಸ್ಟ್ 30ರ ಗುರುವಾರ ನಡೆದ ರಿಲೇ ಫೈನಲ್ ನಲ್ಲಿ ಭಾರತದ ಓಟಗಾರ್ತಿಯರು ಬಂಗಾರದಿಂದ ಮಿನುಗಿದರು.
ಸ್ಟಾರ್ ಓಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡ ಮಹಿಳಾ ವಿಭಾಗದ 4x400 ಮೀ. ರಿಲೇ ಓಟದಲ್ಲಿ ಬಂಗಾರ ತನ್ನದಾಗಿಸಿಕೊಂಡಿತು. ಭಾರತ ತಂಡ 3:28.72 ಸೆಕೆಂಡ್ ಗಳಲ್ಲಿ 400ರ ನಾಲ್ಕು ಸುತ್ತನ್ನು ಮುಗಿಸಿತು.
ಇದಕ್ಕೂ ಮುನ್ನ ಅಥ್ಲೀಟ್ ಜಿನ್ಸನ್ ಜಾನ್ಸನ್ ಬಂಗಾರ ಗೆದ್ದಿದ್ದರು. ಪುರುಷರ 1500 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಚಾಂಪಿಯನ್ ಆಗಿ ಮೂಡಿ ಬಂದಿದ್ದರು. ಮತ್ತೊಬ್ಬ ಸ್ಪರ್ಧಿ ಮನ್ಜೀತ್ ಸಿಂಗ್ ನಾಲ್ಕನೇ ಸ್ಥಾನಿಗರಾಗಿ ಓಟ ಮುಗಿಸಿದ್ದರು.