
ಜಕಾರ್ತಾ, ಆಗಸ್ಟ್ 30: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ 4x400 ಮೀ. ರಿಲೇ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಭಾರತದ ಪಾಲಾಗಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ ಒಟ್ಟು 59 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಆಗಸ್ಟ್ 30ರ ಗುರುವಾರ ನಡೆದ ಪುರುಷರ 4x400 ಮೀ. ರಿಲೇಯಲ್ಲಿ ಮೊಹಮ್ಮದ್ ಅನಾಸ್, ಕುನ್ಹು ಮುಹಮ್ಮದ್ ಪುತನ್ಪುಕ್ಕಲ್, ಅರೋಕಿಯ ರಾಜೀವ್ ಮತ್ತು ಧರುಣ್ ಅಯ್ಯಸಾಮಿ ಅವರನ್ನೊಳಗೊಂಡ ತಂಡಕ್ಕೆ ಬೆಳ್ಳಿ ಪದಕ ದೊರೆತಿದೆ. 3:01.85 ಕಾಲಾವಧಿಯಲ್ಲಿ ಭಾರತ ಬೆಳ್ಳಿ ಪದಕ ತನ್ನದಾಗಿಸಿತು.
ಮಹಿಳಾ 4x400 ಮೀ. ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಚಿನ್ನ ಜಯಿಸಿತ್ತು. ಸ್ಟಾರ್ ಓಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡ ಮಹಿಳಾ ವಿಭಾಗದ 4x400 ಮೀ. ರಿಲೇ ಓಟದಲ್ಲಿ ಬಂಗಾರ ತನ್ನದಾಗಿಸಿಕೊಂಡಿತ್ತು.