
ಜಕಾರ್ತಾ, ಆಗಸ್ಟ್ 30: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮಹಿಳಾ ವಿಭಾಗದ 1500 ಮೀಟರ್ ಓಟದಲ್ಲಿ ಭಾರತದ ಪಿಯು ಚಿತ್ರಾ ಅವರು ಕಂಚಿನ ಪದಕ ಗೆದ್ದಿದ್ದಾರೆ. ಚಿತ್ರಾ ಭಾರತಕ್ಕೆ ಗೆದ್ದಿದ್ದು ಇದು 55ನೇ ಪದಕ.
ಆಗಸ್ಟ್ 30ರ ಗುರುವಾರ ನಡೆದ ಮಹಿಳಾ 1500 ಓಟದಲ್ಲಿ ಪಿಯು ಚಿತ್ರ ಕಂಚು ತನ್ನದಾಗಿಸಿಕೊಂಡರು. ಚಿತ್ರಾ 4:12.56 ಸೆಕೆಂಡ್ ಗಳಲ್ಲಿ ಓಟ ಮುಗಿಸಿದರು. ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಂಗಾರ ಭಾರತದ ಪಾಲಾಗಿದೆ. ಜಿನ್ಸನ್ ಜಾನ್ಸನ್ 1500ನಲ್ಲಿ ಚಿನ್ನ ಜಯಿಸಿದ್ದಾರೆ.
ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ 62.26 ಮೀ. ಸಾಧನೆಯೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇಂಚಿಯಾನ್ ಗೇಮ್ಸ್ ನಲ್ಲಿ ಪೂನಿಯಾ ಬಂಗಾರ ಗೆದ್ದಿದ್ದರು. ಆಗಸ್ಟ್ 29ರ ದಿನದಾಂತ್ಯಕ್ಕೆ ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತೀಯೆ ಸ್ವಪ್ನಾ ಬರ್ಮನ್ ಬಂಗಾರ ಗೆದ್ದಿದ್ದರು.