
ಜಕಾರ್ತಾ, ಆಗಸ್ಟ್ 22: ರಾಹಿ ಜೀವನ್ ಸರ್ನೊಬಾತ್ ಅವರು ಏಷ್ಯನ್ ಗೇಮ್ಸ್ 2018ರ ನಾಲ್ಕನೇ ದಿನ ಭಾರತಕ್ಕೆ 11ನೇ ಪದಕದ ಕೊಡುಗೆ ನೀಡಿದ್ದಾರೆ. ಶೂಟಿಂಗ್ ನಲ್ಲಿ ರಾಹಿ ಗೆದ್ದ ಚಿನ್ನ, ಪದಕ ಪಟ್ಟಿಯ ರ್ಯಾಂಕಿಂಗ್ ನಲ್ಲಿ ಭಾರತವನ್ನು ಮೇಲಕ್ಕೇರಿಸಿದೆಯಲ್ಲದೆ ಹೊಸ ದಾಖಲೆಗೂ ಕಾರಣವಾಗಿದೆ.
ಆಗಸ್ಟ್ 22ರ ಬುಧವಾರ ರಾಹಿ ಸರ್ನೊಬಾತ್ ಅವರು ಮಹಿಳಾ ವಿಭಾಗದ ಶೂಟಿಂಗ್ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ 4ನೇ ಚಿನ್ನದ ಕೊಡುಗೆ ನೀಡಿದ್ದರು. ಇದರೊಂದಿಗೆ ರಾಹಿ ಅವರು ಏಷ್ಯನ್ ಗೇಮ್ಸ್ ನ ಶೂಟಿಂಗ್ ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಮಹಿಳೆಯಾಗಿಯೂ ಇತಿಹಾಸ ನಿರ್ಮಿಸಿದ್ದಾರೆ.
27ರ ಹರೆಯದ ಸರ್ನೊಬಾತ್ ಅವರು ಮೂಲತಃ ಕೋಲ್ಲಾಪುರದವರು. ಈ ಮೊದಲು 2008ರಲ್ಲಿ ಪುಣೆಯಲ್ಲಿ ನಡೆದಿದ್ದ ಕಾಮನ್ವೆಲ್ತ್ ಯೂತ್ ಗೇಮ್ಸ್ ಶೂಟಿಂಗ್ ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದರು. ಈವರೆಗೆ ಕ್ರೀಡಾ ಕೂಟದ ಪದಕಗಳನ್ನು ಗಮನಿಸಿದಾಗ ಶೂಟಿಂಗ್ ನದ್ದೇ ಕೊಡುಗೆ ಹೆಚ್ಚು. ರಾಹಿ ಪದಕ ಸೇರಿಸಿ ಶೂಟಿಂಗ್ ನಲ್ಲಿ ಒಟ್ಟು 7 ಪದಕಗಳು ಭಾರತದ ಪಾಲಾಗಿವೆ.
ಶೂಟಿಂಗ್ ವಿಭಾಗದಲ್ಲಿ ಸರ್ನೊಬಾತ್ ಅವರೊಂದಿಗೆ ರವಿ ಕುಮಾರ್-ಅಪೂರ್ವಿ ಕಂಚು, ದೀಪಕ್ ಕುಮಾರ್ ಬೆಳ್ಳಿ, ಲಕ್ಷಯ್ ಶಿಯೊರಾನ್ ಬೆಳ್ಳಿ, ಅಭಿಷೇಕ್ ವರ್ಮಾ ಕಂಚು, ಸೌರಭ್ ಚೌಧರಿ ಚಿನ್ನ, ಸಂಜೀವ್ ರಜಪೂತ್ ಬೆಳ್ಳಿಗೆದ್ದ ಸಾಧನೆ ಮಾಡಿದ್ದಾರೆ.