
ಜಕಾರ್ತಾ, ಆಗಸ್ಟ್ 30: ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುಯ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗದ ಪದಕ ಬೇಟೆ 12ನೇ ದಿನವೂ ಮುಂದುವರೆದಿದೆ. ಭಾರತದ ಅಥ್ಲೀಟ್ ಸೀಮಾ ಪೂನಿಯಾ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದಿದ್ದಾರೆ.
ಆಗಸ್ಟ್ 30ರ ಗುರುವಾರ ನಡೆದ ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ 62.26 ಮೀ. ಸಾಧನೆಯೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇಂಚಿಯಾನ್ ಗೇಮ್ಸ್ ನಲ್ಲಿ ಪೂನಿಯಾ ಬಂಗಾರ ಗೆದ್ದಿದ್ದರು. ಇದರೊಂದಿಗೆ ಭಾರತದ ಪದಕ ಖಾತೆಗೆ 55 ಪದಕಗಳು ಸೇರಿಕೊಂಡಿವೆ. ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಆಗಸ್ಟ್ 29ರ ದಿನದಾಂತ್ಯಕ್ಕೆ ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತೀಯೆ ಸ್ವಪ್ನಾ ಬರ್ಮನ್ ಬಂಗಾರ ಗೆದ್ದಿದ್ದರು. ಪುರುಷರ ಲಾಂಗ್ ಜಂಪ್ ನಲ್ಲಿ ಅರ್ಪೀಂದರ್ ಸಿಂಗ್ ಕೂಡ ಭಾರತಕ್ಕೆ ಬಂಗಾರದ ಕೊಡುಗೆ ನೀಡಿದ್ದರು. ಅಥ್ಲೆಟಕ್ಸ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಹೆಚ್ಚಿನ ಪದಕಗಳು ಲಭಿಸಿವೆ.