107 ಪದಕ ಗೆದ್ದು ಐತಿಹಾಸಿಕ ಸಾಧನೆಯೊಂದಿಗೆ ಭಾರತದ ಏಷ್ಯನ್ ಗೇಮ್ಸ್ ಅಭಿಯಾನ ಅಂತ್ಯ
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಕ್ರೀಡಾಪಟುಗಳು ಈ ಹಿಂದೆಂದೂ ಮಾಡಲಾಗದ ಸಾಧನೆಯನ್ನು ಮಾಡಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪದಕ ಗೆದ್ದ ಸಾಧನೆ ಮಾಡಿದ್ದು ಒಟ್ಟಾರೆಯಾಗು 107 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತದ ಏಷ್ಯನ್ ಗೇಮ್ಸ್ ಅಭಿಯಾನ ಅಂತ್ಯಕಂಡಿದೆ.
ಭಾರತ ಇಲ್ಲಿಯವರೆಗೆ ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ ಜಗಾರ್ತಾದಲ್ಲಿ ನಡೆದಾಗ 70 ಪದಕಗಳನ್ನು ಗೆದ್ದಿರುವುದು ಅತಿ ದೊಡ್ಡ ಸಾಧನೆಯಾಗಿತ್ತು. ಹೀಗಾಗಿ ಈ ಬಾರಿ ಆ ಸಾಧನೆಯನ್ನು ಮೀರಿ ನೂರಕ್ಕೂ ಅಧಿಕ ಪದಕ ಗೆಲ್ಲಬೇಕು ಎನ್ನುವ ಗುರಿಯೊಂದಿಗೇ ಭಾರತ ಕ್ರೀಡಾಕೂಟಕ್ಕೆ ಕಣಕ್ಕಿಳಿದಿತ್ತು. ತನ್ನ ಧ್ಯೇಯ ವಾಕ್ಯಕ್ಕೆ ತಕ್ಕದಾದ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾಪಟುಗಳು 107 ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ಭಾರೀ ದೊಡ್ಡ ಗಾಥ್ರದ ಕ್ರೀಡಾಪಟುಗಳ ಬಳಗದೊಂದಿಗೆ ಕಣಕ್ಕಿಳಿದಿತ್ತು. ಬಹುತೇಕ ಎಲ್ಲಾ ವಿಭಾಗದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸಿದ್ದು 655 ಸ್ಪರ್ಧಿಗಳು ಭಾಗಿಯಾಗಿದ್ದರು. ಈ ತಂಡ ಕೊಟ್ಯಂತರ ಭಾರತೀಯ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಭಾರತ 28 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು ಇದು ಕೂಡ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಅತ್ಯುನ್ನತ ಸಾಧನೆಯಾಗಿದೆ. ಇನ್ನು 38 ಬೆಳ್ಳಿ ಪದಕ ಹಾಗೂ 41 ಕಂಚಿನ ಪದಕಗಳು ಭಾರತದ ಪಾಲಾಗಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದರೆ ಎರಡನೇ ಸ್ಥಾನವನ್ನು ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ.
ಇನ್ನು ಈಗಾಗಲೇ ತಿಳಿಸಿದಂತೆ ಈ ಹಿಂದಿನ 2018ರ ಜಕಾರ್ತಾ ಏಷ್ಯಾಡ್‌ನಲ್ಲಿ ಭಾರತ 16 ಚಿನ್ನದ ಪದಕಗಳನ್ನು ಪಡೆದಿತ್ತು. ಈ ಬಾರಿ 28 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯ ನಿರ್ಣಾಯಕ ದಿನವಾದ ಶನಿವಾರ ಭಾರತವು ಒಟ್ಟು 12 ಪದಕಗಳನ್ನು ಗೆಲ್ಲುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಅಂತಿಮ ದಿನ ಭಾರತ ಇದರಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಇನ್ನು ಕೆಲ ಸ್ಪರ್ಧಿಗಳು ಈ ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಮಾತ್ರವೇ ಗೆದ್ದಿಲ್ಲ. ಇದರ ಜೊತೆಗೆ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕೂಡ ಅರ್ಹತೆಯನ್ನು ಈ ಕ್ರೀಡಾಕೂಟದ ಮೂಲಕ ಗಳಿಸಿಕೊಂಡಿದ್ದಾರೆ. ಕೆಲ ವಿಭಾಗಗಳಲ್ಲಿ ಏಷ್ಯನ್ ಗೇಮ್ಸ್ನ ಪದಕಗಳು ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತೆಗೆ ಮಾನದಂಡವಾಗಿದ್ದವು. ವಿವಿಧ ಕ್ರೀಡಾ ವಿಭಾಗಗಳಲ್ಲಿ ಒಟ್ಟು 74 ಒಲಿಂಪಿಕ್ ಕೋಟಾಗಳನ್ನು ಭಾರತೀಯ ಸ್ಪರ್ಧಿಗಳು ಗಳಿಸಿಕೊಂಡಿದ್ದಾರೆ. ಆರ್ಚರಿಯಲ್ಲಿ 6, ಆರ್ಟಿಸ್ಟಿಕ್ ಸ್ವಿಮ್ಮಿಂಗ್ನಲ್ಲಿ 10, ಬಾಕ್ಸಿಂಗ್ನಲ್ಲಿ 34, ಬ್ರೇಕಿಂಗ್ನಲ್ಲಿ 2, ಹಾಕಿಯಲ್ಲಿ 2, ಮಾಡರ್ನ್ ಪೆಂಟಾಥ್ಲಾನ್ನಲ್ಲಿ 10, ಸೇಯ್ಲಿಂಗ್ನಲ್ಲಿ 6, ಟೆನಿಸ್ನಲ್ಲಿ 2 ಮತ್ತು ವಾಟರ್ ಪೋಲೊದಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ದೊರೆತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications