ಏಷ್ಯನ್ ಗೇಮ್ಸ್ ಆರಂಭಕ್ಕೆ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿಯ ಎಲ್ಲಾ ಆವೃತ್ತಿಗಳಲ್ಲಿ ಭಾರತ ಭಾಗವಹಿಸಿದ್ದು, 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದೆ.
1951ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 51 ಪದಕಗಳನ್ನು ಬಾಚಿಕೊಂಡಿತ್ತು. ಅದರಲ್ಲಿ 15 ಚಿನ್ನ, 16 ಬೆಳ್ಳಿ ಮತ್ತು 20 ಕಂಚಿನ ಪದಕಗಳು ಸೇರಿದ್ದವು. ಜಪಾನ್ (60 ಪದಕಗಳು) ನಂತರ ಎರಡನೇ ಸ್ಥಾನ ಗಳಿಸಿತ್ತು. ಇದು ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಮುಕ್ತಾಯವಾಗಿದೆ.

1951ರ ಉದ್ಘಾಟನಾ ಆವೃತ್ತಿಯ ನಂತರ ಭಾರತವು ಏಷ್ಯನ್ ಗೇಮ್ಸ್‌ನಲ್ಲಿ 672 ಪದಕಗಳನ್ನು ಗೆದ್ದಿದೆ. ಜಕಾರ್ತಾದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ದಾಖಲೆಯ ಸಾಧನೆಯೊಂದಿಗೆ ಅಭಿಯಾನ ಮುಗಿಸಿತು.
ಇದೀಗ 2023ರ ಸೆಪ್ಟೆಂಬರ್ 23ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಕಬಡ್ಡಿ, ಕ್ರಿಕೆಟ್, ಹಾಕಿ, ಕುಸ್ತಿ ಸೇರಿದಂತೆ ವೈಯಕ್ತಿಕ ವಿಭಾಗದಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಲು ಉತ್ಸುಕವಾಗಿದೆ.
'ದಿ ಫ್ಲೈಯಿಂಗ್ ಸಿಖ್' ಎಂದೇ ಖ್ಯಾತಿಯಾಗಿರುವ ಮಿಲ್ಕಾ ಸಿಂಗ್ ಅವರು 1929ರ ನವೆಂಬರ್ 20ರಂದು ಪಂಜಾಬ್‌ನ ಗೋವಿಂದಪುರದಲ್ಲಿ ಜನಿಸಿದರು.
ಮಿಲ್ಕಾ ಸಿಂಗ್ ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪ್ರಿಂಟರ್ ಆಗಿದ್ದು, ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕ್ರೀಡೆಗೆ ಪರಿಚಿತರಾದರು.

ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಆಗಿದ್ದರು. ಮಿಲ್ಕಾ ಸಿಂಗ್ 1958 ಮತ್ತು 1962ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ಸ್ಪ್ರಿಂಟ್ ದಂತಕಥೆ ಮಿಲ್ಕಾ ಸಿಂಗ್ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 1958ರ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಚಿನ್ನವನ್ನು ಗೆದ್ದರು. 1962ರ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4 x 400 ಮೀಟರ್ ರಿಲೇಯಲ್ಲಿ ಎರಡು ಚಿನ್ನದ ಪದಕಗಳನ್ನು ಬಾಚಿಕೊಂಡರು.
ಮಿಲ್ಕಾ ಸಿಂಗ್ ಮತ್ತು ಅವರ ಮಗಳು ಸೋನಿಯಾ ಸನ್ವಾಲ್ಕಾ ಅವರು ಸೇರಿ 'ದಿ ರೇಸ್ ಆಫ್ ಮೈ ಲೈಫ್' ಎಂಬ ಶೀರ್ಷಿಕೆಯೊಂದಿಗೆ ಆತ್ಮಚರಿತ್ರೆ ಬರೆದರು. ಇದನ್ನು 2013ರಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕವು 2013ರಲ್ಲಿ ಮಿಲ್ಕಾ ಸಿಂಗ್ ಜೀವನಚರಿತ್ರೆಯ ಚಲನಚಿತ್ರ 'ಭಾಗ್ ಮಿಲ್ಕಾ ಭಾಗ್' ಚಿತ್ರಕ್ಕೆ ಸ್ಫೂರ್ತಿ ನೀಡಿತು.
ಮಿಲ್ಕಾ ಸಿಂಗ್ ಅವರು ತಮ್ಮ ಪತ್ನಿ ನಿರ್ಮಲ್ ಸೈನಿ ಮರಣ ಹೊಂದಿದ ಐದು ದಿನಗಳ ನಂತರ, ತಮ್ಮ 91ನೇ ವಯಸ್ಸಿನಲ್ಲಿ 18 ಜೂನ್ 2021ರಂದು ಕೋವಿಡ್-19 ಸೋಂಕಿನಿಂದ ನಿಧನರಾದರು.
ಮಿಲ್ಕಾ ಸಿಂಗ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ, ಅರ್ಜುನ ಪ್ರಶಸ್ತಿ ಮತ್ತು ಭಾರತ್ ಗೌರವ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.