ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಪಾರೂಲ್ ಚೌಧರಿ ಚಿನ್ನದ ಪದಕವನ್ನು ಗೆದ್ದ ನಂತರ ಮತ್ತೋರ್ವ ಮಹಿಳಾ ಅಥ್ಲೀಟ್ ಅನ್ನು ರಾಣಿ ಚಿನ್ನದ ಪದಕವನ್ನು ಗೆದ್ದು ಬೀಗಿದ್ದಾರೆ. ಜಾವೆಲಿನ್ ಎಸೆತದಲ್ಲಿ ಅನ್ನು ರಾಣಿ ಚಿನ್ನದ ಎಸೆತವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 71 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅನ್ನು 62.92 ಮೀ. ದೂರಕ್ಕೆ ಎಸೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದರು. ಪ್ರಸ್ತುತ 31ರ ಹರೆಯದ ಅನ್ನು ರಾಣಿ ಇದಕ್ಕೂ ಮುನ್ನ 2014ರಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.

ಭಾರತದ ಅಥ್ಲೀಟ್ ಪಾರೂಲ್ ಚೌಧರಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದು ಈ ಬಾರಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 5000 ಮೀಟರ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾರೂಲ್ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದು 5000 ಮೀ ಸ್ಪರ್ಧೆಗೆ ಕಣಕ್ಕಿಳಿದ ಪಾರುಲ್ ನಿಧಾನವಾಗಿ ಆರಂಭವನ್ನು ಪಡೆದುಕೊಂಡರು. 10-ಲ್ಯಾಪ್ ಓಟದ ಬಹುಪಾಲು ಭಾಗದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿಯೇ ಇದ್ದರು. ಆದರೆ ಅಂತಿಮ ಹಂತದಲ್ಲಿ ಅದ್ಭುತವಾಗಿ ತಮ್ಮ ವೇಗವನ್ನು ಅವರು ಹೆಚ್ಚಿಸಿಕೊಂಡು ಆರಂಭದಿಂದಲೂ ಮೊದಲು ಸ್ಥಾನದಲ್ಲಿ ಓಡುತ್ತಿದ್ದ ಜಪಾನ್‌ನ ರಿರಿಕಾ ಹಿರೋನಾಕಾ ಅವರ ವೇಗವನ್ನು ಸರಿಗಟ್ಟಿದರು.