
ಜಕಾರ್ತಾ, ಆಗಸ್ಟ್ 19: ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತ ಪರ ಮೊದಲ ಚಿನ್ನ ಗೆದ್ದಿದ್ದಾರೆ. ಪುರುಷರ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚೀನಾದ ತಕಾತನಿ ಡೈಚಿ ಅವರನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಭಾನುವಾರ (ಆ.19) ಪುರುಷರ 65 ಕೆಜಿ ವಿಭಾಗದ ಕುಸ್ತಿ ಫೈನಲ್ ಸ್ಪರ್ಧೆಯಲ್ಲಿ ಬಜರಂಗ್ ಅವರು ತಕಾತನಿ ವಿರುದ್ಧ 11-8 ರ ಗೆಲುವು ದಾಖಲಿಸಿದರು. ಇದಕ್ಕೂ ಮುನ್ನ ಶೂಟಿಂಗ್ ನ 10 ಮೀ. ಏರ್ ರೈಫಲ್ ವಿಭಾಗದ ಮಿಶ್ರ ಡಬಲ್ಸ್ ನಲ್ಲಿ ಅಪೂರ್ವಿ ಚಂದೇಲಾ ಮತ್ತು ರವಿ ಕುಮಾರ್ ಭಾರತಕ್ಕೆ ಕಂಚು ಗೆದ್ದು ಪದಕ ಖಾತೆ ತೆರೆದಿದ್ದರು.
ಪುರುಷರ ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿದ್ದ ಸುಶೀಲ್ ಕುಮಾರ್ ಪುರುಷರ 74 ಕೆಜಿ ವಿಭಾಗದ ಕುಸ್ತಿಯಲ್ಲಿ ಬಹ್ರೇನ್ ನ ಆದಮ್ ಬಟಿರೊವ್ ಅವರೆದುರು ಮೊದಲ ಪಂದ್ಯದಲ್ಲೇ ಸೋತು ಪಂದ್ಯದಿಂದ ಹೊರ ಬಿದ್ದಿದ್ದರು.