19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ದಿನಗಣನೆ ಆರಂಭವಾಗಿದ್ದು ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಆಟಗಾರರ ಪಡೆಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಈ ಬಾರಿ ಏಷ್ಯನ್ ಗೇಮ್ಸ್‌ಗೆ ಭಾರತ ಅತ್ಯಂತ ದೊಡ್ಡ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆಯ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಪ್ರತಿ ಕ್ರೀಡಾ ವಿಭಾಗದ ಮೇಲೆ ಯೂ ಸಾಕಷ್ಟು ನಿರೀಕ್ಷೆ ಕೂತೂಹಲಗಳಿವೆ.
ಭಾರತ ಚಿನ್ನದ ಪದಕ ಗೆಲ್ಲುವ ಸಾಧ್ಯತೆಯಿರುವ ಕ್ರೀಡೆಯಲ್ಲಿ ಸ್ಕ್ವಾಶ್ ಕೂಡ ಒಂದು. ಇದಕ್ಕೆ ಕಾರಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸ್ಕ್ವಾಶ್ ತಂಡ ಈವರೆಗೆ ಗೆದ್ದಿರುವ ಪದಕಗಳ ಸಂಖ್ಯೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಈವರೆಗೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿರುವ ಸಾಧನೆ ಮಾಡಿದೆ. ಒದರಲ್ಲಿ ಒಂದು ಚಿನ್ನದ ಪದಕ ಹಾಗೂ ಮೂರು ಬೆಳ್ಳಿ ಪದಕಗಳು ಸೇರಿದೆ. ಈ ಕ್ರೀಡೆಯಲ್ಲಿ ಅತಿ ಹೆಚ್ಚು ಪದಕಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾಮದಲ್ಲಿದ್ದು ಮಲೇಶ್ಯಾ, ಹಾಂಕಾಂಗ್ ಹಾಗೂ ಪಾಕಿಸ್ತಾನ ತಮಡಗಳು ಮಾತ್ರ ಭಾರತಕ್ಕಿಂತ ಮುಂದಿದೆ.

2014ರಲ್ಲಿ ಭಾರತ ಸ್ಕ್ವಾಶ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡ ಸಾಧನೆ ಮಾಡಿತ್ತು. ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದಿದ್ದ ಆ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಸೌರವ್ ಘೋಸಾಲ್, ಮಹೇಶ್ ಮಂಗಾಂವ್ಕರ್, ಹರಿಂದರ್‌ಪಾಲ್ ಸಿಂಗ್ ಸಂಧು ಮತ್ತ ಕುಶ್ ಕುಮಾರ್ ಸ್ಕ್ವಾಷ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದ ತಂಡದ ಭಾಗವಾಗಿದ್ದರು. ಈ ಬಾರಿ ಭಾರತ ಚಿನ್ನದ ಪದಕ ಗೆದ್ದರೆ ಹಾಂಕಾಂಗ್ ಹಾಗೂ ಪಾಕಿಸ್ಥಾನವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವ ಅವಕಾಶವಿದೆ.
ಚೀನಾದ ಹ್ಯಾಂಗ್‌ಜೂನಲ್ಲಿ ನಡೆಯಲಿರುವ ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಸ್ಕ್ವಾಷ್ ತಂಡ ಅನುಭವ ಮತ್ತು ಯುವಕ ಆಟಗಾರರ ಸಮ್ಮಿಶ್ರ ತಂಡವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ 8 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ.
ಪುರುಷರ ತಂಡದ ಸೌರವ್ ಘೋಶಲ್, ಅಭಯ್ ಸಿಂಗ್, ಮಹೇಶ್ ಮಂಗಾಂವ್ಕರ್ ಮತ್ತು ಹರಿಂದರ್‌ಪಾಲ್ ಸಿಂಗ್ ಸಂಧು ಅವರನ್ನು ಒಳಗೊಂಡಿರುವ ತಂಡವನ್ನು ಹೊಂದಿದ್ದರೆ, ಮಹಿಳಾ ತಂಡದಲ್ಲಿ ಜೋಶ್ನಾ ಚಿನಪ್ಪ, ದೀಪಿಕಾ ಪಲ್ಲಿಕಲ್ ಕಾರ್ತಿಕ್, ಅನಾಹತ್ ಸಿಂಗ್ ಮತ್ತು ತನ್ವಿ ಖನ್ನಾ ಸ್ಥಾನ ಪಡೆದುಕೊಂಡಿದ್ದಾರೆ.