ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಭಾರತದ ಆನ್ಸಿ ಸೋಜನ್ ಎಡಪ್ಪಿಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ತಮ್ಮ ಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಭಾರತದ ಅಥ್ಲೀಟ್ ಅದ್ಭುತ ಸಾಧನೆ ಮಾಡಿದ್ದಾರೆ. ಕೇವಲ 22 ವರ್ಷ ವಯಸ್ಸಿನ ಸೋಜನ್ ಚಾಂಪಿಯನ್ ಚೀನಾದ ಶಿಕಿ ಕ್ಸಿಯಾಂಗ್‌ಗಿಂತ ಕೇವಲ 0.10 ಮೀ ಹಿಂದುಳಿದಿದ್ದರು. 6.63 ಮೀಟರ್‌ಗಳಷ್ಟು ಬೃಹತ್ ಜಿಗಿತವನ್ನು ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಆದರೆ ಈ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಭಾರತದ ಶೈಲಿ ಸಿಂಗ್ ನೀರಸ ಪ್ರದರ್ಶನ ನೀಡಿದ್ದಾರೆ. ಅವರಅತ್ಯುತ್ತಮ ಪ್ರಯತ್ನವನ್ನು 6.48 ಮೀಟರ್‌ಗೆ ಸೀಮಿತವಾಗಿದ್ದು ಇದು ಅವರ ಅತ್ಯುತ್ತಮ ಪ್ರದರ್ಶನಕ್ಕಿಂತಲೂ ಬಹಳಷ್ಟು ಹಿಂದಿತ್ತು. ಈ ಸ್ಪರ್ಧೆಯಲ್ಲಿ ಅವರು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕೇರಳದ ತ್ರಿಶೂರ್ ಮೂಲದ ಆನ್ಸಿ ಸೋಜನ್ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಅಂಟರ್ 21 ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 100 ಮೀ, 200 ಮೀ, ಲಾಂಗ್ ಜಂಪ್ ಮತ್ತು 4x100 ರಿಲೇಯಲ್ಲಿ 4 ಚಿನ್ನದ ಪದಕಗಳನ್ನು ಕೂಡ ಗೆದ್ದ ಸಾಧನೆ ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಆನ್ಸಿ ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 6.41ಮೀ ಜಿಗಿತದೊಂದಿಗೆ 4ನೇ ಸ್ಥಾನ ಪಡೆದುಕೊಂಡಿದ್ದರು.
ಆನ್ಸಿ ತನ್ನ 5ನೇ ಪ್ರಯತ್ನದಲ್ಲಿ 6.56 ಮೀಟರ್ ಜಿಗಿಯುವ ಮೂಲಕ ತನ್ನ ಈ ಹಿಂದಿನ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಹಿಂದಿಕ್ಕಿದರು. ತನ್ನ ಎರಡನೇ ಪ್ರಯತ್ನದಲ್ಲಿ 6.49 ಮೀ ನಲ್ಲಿ ಜಿಗಿದಿದ್ದ ಅವರು ನಂತರ ಅದನ್ನು ಹಿಂದಿಕ್ಕಿದರು. ಆದರೆ ಮತ್ತೊಂದೆಡೆ ಶೈಲಿ ಸಿಂಗ್ ಇದಕ್ಕೆ ವಿರುದ್ಧವಾದ ಪ್ರದರ್ಶನ ನೀಡಿದ್ದಾರೆ. ತನ್ನ 5 ನೇ ಜಿಗಿತದವರೆಗೆ ತನ್ನ ಮೊದಲ ಜಿಗಿತವನ್ನು (6.38 ಮೀ) ಉತ್ತಮಪಡಿಸಲು ಅವರಿಂದ ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್‌ನ ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಜಯಿಸಿದ್ದರು. ಶ್ರೀಶಂಕರ್ 8.19 ಮೀ ಜಿಗಿತದೊಂದಿಗೆ ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡರು. 8.22 ಮೀ ದೂರ ಜಿಗಿದಿದ್ದ ಚೀನಾದ ವಾಂಗ್ ಜಿಯಾನನ್ ಮೊದಲ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು.
ಇನ್ನು ಮತ್ತೊಂದೆಡೆ ಏಷ್ಯನ್ ಗೇಮ್ಸ್‌ನ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಬಹ್ರೇನ್ ಅಥ್ಲೀಟ್‌ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದ ಭಾರತ ಇದೇ ವಿಭಾಗದಲ್ಲಿ ಕಂಚಿನ ಪದಕವನ್ನು ಕೂಡ ತನ್ನದಾಗಿಸಿಕೊಂಡಿದೆ. ಇದೇ ಸ್ಪರ್ಧೆಯಲ್ಲಿ ಭಾರತ ಅಥ್ಲೀಟ್ ಪ್ರೀತಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ 9.27.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ವಿಶ್ವ ಚಾಂಪಿಯನ್ ಯಾವಿ ವಿನ್‌ಫ್ರೈಡ್ ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದು 9:18.26 ಸೆಕೆಂಡ್‌ಗಳಲ್ಲಿ ಗುರಿತಲುಪಿ ಚಿನ್ನದ ಪದಕ ಗೆದ್ದುಕೊಂಡರು.