
ಜಕಾರ್ತಾ, ಆಗಸ್ಟ್ 27: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗ ಮಿಂಚುತ್ತಿದೆ. ಭಾರತದ ಸುಧಾ ಸಿಂಗ್ ಅವರು ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದಿದ್ದಾರೆ.
ಸೋಮವಾರ (ಆಗಸ್ಟ್ 27) ನಡೆದ ಮಹಿಳಾ 3,000 ಮೀ. ಸ್ಟೀಪಲ್ ಚೇಸ್ ಫೈನಲ್ ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. 9:40.03 ಸೆಕೆಂಡ್ ಗಳಲ್ಲಿ ಸುಧಾ ಓಟ ಮುಗಿಸಿ ಬೆಳ್ಳಿಗೆ ಮುತ್ತಿಕ್ಕಿದರು.
ಸೋಮವಾರವೇ ಧರುಣ್ ಅಯ್ಯಸಾಮಿ ಅವರು ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ತಂದಿದ್ದರು. ಪುರುಷರ 400 ಮೀ. ಹರ್ಡಲ್ಸ್ ಫೈನಲ್ ನಲ್ಲಿ ಅಯ್ಯಸಾಮಿ 48.96 ಸೆಕೆಂಟ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಭಾರತದ ಪದಕ ಪಟ್ಟಿಯಲ್ಲೀಗ 39 ಪದಕಗಳು ಸೇರಿಕೊಂಡಿದ್ದು, ಭಾರತ 9ನೇ ಸ್ಥಾನದಲ್ಲಿದೆ.