
ನವದೆಹಲಿ, ಆಗಸ್ಟ್ 4: ಇರಾನ್ ನಲ್ಲಿ ನಡೆದ ಏಷ್ಯನ್ ಕಪ್ ಚೆಸ್ ಟೂರ್ನಮೆಂಟ್ ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಗೆದ್ದರೆ, ಮಹಿಳಾ ತಂಡ ಕಂಚು ಜಯಿಸಿದೆ. ಅಲ್ಲದೆ ಬ್ಲಿಟ್ಜ್ ವಿಭಾಗದಲ್ಲಿ ಮಹಿಳಾ ತಂಡ ಚಿನ್ನಕ್ಕೆ ಕೊರಳೊಡ್ಡಿದೆ.
ಬಿ ಅಧಿಬನ್, ಎಸ್.ಪಿ. ಸೇತುರಾಮನ್, ಕೆ ಶಶಿಕಿರಣ್, ಸೂರ್ಯ ಶೇಖರ್ ಮತ್ತು ಅಭಿಜಿತ್ ಗುಪ್ತ ಅವರಿದ್ದ ಪುರುಷರ ತಂಡ ಫೈನಲ್ ಸುತ್ತಿನಲ್ಲಿ 10 ಪಾಯಿಂಟ್ ಗಳೊಂದಿಗೆ ಬೆಳ್ಳಿ ತನ್ನದಾಗಿಸಿಕೊಂಡಿತು. 13 ಪಾಯಿಂಟ್ ಗಳಿಂದ ಇರಾನ್ ಗ್ರೀನ್ ತಂಡ ಚಿನ್ನ ಜಯಿಸಿತು.
ಡಿ ಹಾರಿಕಾ, ಆರ್ ವೈಶಾಲಿ, ಈಶ ಕಾರ್ವಾಡೆ, ಪದ್ಮಿನಿ ರಾವುತ್ ಮತ್ತು ಆಕಾಂಕ್ಷ ಅವರನ್ನೊಳಗೊಂಡ ಮಹಿಳಾ ತಂಡ 8 ಪಾಯಿಂಟ್ ಗಳಿಂದ ತೃತೀಯ ಸ್ಥಾನ ಗಳಿಸಿತು. 13 ಪಾಯಿಂಟ್ ಗಳಿಂದ ಚೀನಾ ಚಿನ್ನ ಗೆದ್ದರೆ, 10 ಪಾಯಿಂಟ್ ಗಳಿಂದ ವಿಯೆಟ್ನಾಂ ಬೆಳ್ಳಿ ಗೆದ್ದಿತು.
ಆದರೆ ವೇಗದ ಸ್ಪರ್ಧೆ ಬ್ಲಿಟ್ಜ್ ನಲ್ಲಿ ಭಾರತದ ಮಹಿಳಾ ತಂಡ ಚಿನ್ನ ಗೆದ್ದುಕೊಂಡಿತು. ಈ ವಿಭಾರದಲ್ಲಿ 13 ಪಾಯಿಂಟ್ ಗಳಿಸಿದ ಭಾರತ, 12 ಪಾಯಿಂಟ್ ಗಳಿಸಿದ್ದ ವಿಯೆಟ್ನಾಂ ತಂಡವನ್ನು ದ್ವಿತೀಯ ಸ್ಥಾನಕ್ಕೆ, 9 ಪಾಯಿಂಟ್ ಗಳಿಸಿದ್ದ ಚೀನಾವನ್ನು ತೃತೀಯ ಸ್ಥಾನಕ್ಕೆ ತಳ್ಳಿತು.