Babita Phogat: ಸಾಕ್ಷಿ ಮಲಿಕ್ ಆರೋಪಕ್ಕೆ ಕವನ ಬರೆದು ಬಬಿತಾ ಫೋಗಟ್ ತಿರುಗೇಟು
ಇತ್ತೀಚಿನ ದಿನಗಳಲ್ಲಿ ಭಾರತದ ಕುಸ್ತಿಪಟುಗಳು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಬಿಜೆಪಿ ಪಕ್ಷದ ನಾಯಕಿ ಮತ್ತು ಮಾಜಿ ಕುಸ್ತಿಪಟು ಬಬಿತಾ ಫೋಗಟ್ ಮುನ್ನೆಲೆಗೆ ಬಂದಿದ್ದಾರೆ. ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸ್ಟಾರ್ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ಮಾಡಿದ ಆರೋಪಕ್ಕೆ ಬಬಿತಾ ಫೋಗಟ್ ಕವನ ಬರೆದು ತಿರುಗೇಟು ಕೊಟ್ಟಿದ್ದಾರೆ.
ಇತ್ತೀಚೆಗೆ ಸಾಕ್ಷಿ ಮಲಿಕ್ ಅವರು ಬಬಿತಾ ಫೋಗಟ್ ವಿರುದ್ಧ ಬಹಿರಂಗವಾಗಿ ದೊಡ್ಡ ಆರೋಪ ಮಾಡಿದ್ದರು. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಕೆಳಗಿಳಿಸಲು ಬಬಿತಾ ಅವರು ಸಂಚು ರೂಪಿಸಿದ್ದರು. ದೇಶದ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಮಾಡುವಂತೆ ಪ್ರಚೋದಿಸಿದ್ದರು ಎಂದು ಬಬಿತಾ ವಿರುದ್ಧ ಸಾಕ್ಷಿ ಮಲಿಕ್ ಆರೋಪ ಹೊರಿಸಿದ್ದರು.

ಸಾಕ್ಷಿ ಮಲಿಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಬಿತಾ ಫೋಗಟ್ ಸಾಮಾಜಿಕ ಜಾಲತಾಣದಲ್ಲಿ ಕವನ ಬರೆದು ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. 'ನಿಮ್ಮ ಸ್ವಂತ ಪಾತ್ರದಿಂದ ಹೊಳೆಯಿರಿ, ಎರವಲು ಪಡೆದ ಬೆಳಕು ಎಷ್ಟು ಕಾಲ ಉಳಿಯುತ್ತದೆ? ಕೆಲವರಿಗೆ ಅಸೆಂಬ್ಲಿ ಸೀಟು, ಕೆಲವರಿಗೆ ಹುದ್ದೆ ಸಿಕ್ಕಿದೆ. ಅಕ್ಕ, ನಿನಗೇನೂ ಸಿಗಲಿಲ್ಲ. ನಿನ್ನ ನೋವು ನನಗೆ ಅರ್ಥವಾಗುತ್ತದೆ. ಪುಸ್ತಕವನ್ನು ಮಾರುವ ಸಲುವಾಗಿ ನನ್ನ ಗೌರವವನ್ನು ಮಾರಿದೆ' ಎಂದು ಬಬಿತಾ ಫೋಗಟ್ ಕವನ ಬರೆದು ಸಾಕ್ಷಿ ಮಲಿಕ್ ಕಾಲೆಳೆದಿದ್ದಾರೆ.
ಕಳೆದ ವರ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯ ನೇತೃತ್ವವನ್ನು ಸ್ಟಾರ್ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯ ಮತ್ತು ಸಾಕ್ಷಿ ಮಲಿಕ್ ಅವರು ವಹಿಸಿದ್ದರು. ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಬಬಿತಾ ಕೈವಾಡವಿದೆ ಎಂದು ಸಾಕ್ಷಿ ಹೇಳಿದ್ದರು.
ದಂಗಲ್ ಚಿತ್ರ ವಿರುದ್ಧ ಅಸಮಾಧಾನ
2016ರಲ್ಲಿ ತೆರೆಕಂಡ 'ದಂಗಲ್' ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದ ಗಳಿಕೆ ಬಗ್ಗೆ ಮೊದಲ ಬಾರಿಗೆ ಬಬಿತಾ ಪ್ರತಿಕ್ರಿಯಿಸಿದ್ದಾರೆ. ದಂಗಲ್ ಸಿನಿಮಾದಿಂದ ನಮಗೆ ಸಿಕ್ಕಿರುವುದು ಕೇವಲ 1 ಕೋಟಿ ರೂ.ಗಳು ಮಾತ್ರ ಎಂದು ಅವರು ಬಹಿರಂಗಪಡಿಸಿದ್ದಾರೆ. ಫೋಗಟ್ ಕುಟುಂಬದ ನೈಜ ಕಥೆಯನ್ನು ಆಧರಿಸಿದ ತೆರೆ ಕಂಡಿದ್ದ ಈ ಸಿನಿಮಾ ವಿಶ್ವಾದ್ಯಂತ ಒಟ್ಟು 2000 ಕೋಟಿ ರೂ.ಗಳನ್ನು ಗಳಿಸಿದೆ. ಆದರೆ ನಮ್ಮ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಕೇವಲ 1 ಕೋಟಿ ರೂ. ಗಳನ್ನು ಪಡೆದಿದೆ ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ದಂಗಲ್ ಸಿನಿಮಾದ ಬಗ್ಗೆ ಕೇಳಿದ ಪ್ರಶ್ನೆಗೆ ಬಬಿತಾ ಉತ್ತರಿಸಿದ್ದಾರೆ.
ನಿತೀಶ್ ತಿವಾರಿ ನಿರ್ದೇಶನದ ದಂಗಲ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹರಿಯಾಣ ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರ ತಮ್ಮ ಪುತ್ರಿಯರಾದ ಗೀತಾ ಮತ್ತು ಬಬಿತಾ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ಬೆಳೆಸಿದ ಕಥೆಯನ್ನು ಹೇಳುತ್ತದೆ. ಅಮೀರ್ ಖಾನ್ ನಟನೆ ಜೊತೆಗೆ ಸಿನಿಮಾಗೆ ಹೂಡಿಕೆಯನ್ನೂ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications