ಡೆನ್ಮಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪುರುಷರ ಜೋಡಿ ಪ್ರೀ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದೆ. ಬುಧವಾರ ನಡೆದ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸೊಗಸಾದ ಪ್ರದರ್ಶನ ನೀಡಿ ಜಯ ಸಾಧಿಸಿದರು.
ರಾಯಲ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಜೋಡಿ 21-16, 21-9 ರಿಂದ ಆಸ್ಟ್ರೇಲಿಯಾದ ಜೋಡಿ ಜೆ ಹೋಯ್ ಚೂ ಹಾಗೂ ಮಿನ್ ಚುಯಿನ್ ಲಿನ್ ವಿರುದ್ಧ ಜಯ ಸಾಧಿಸಿತು. ಎರಡು ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದ ಭಾರತದ ಜೋಡಿ ಅಬ್ಬರಿಸಿತು.

ದುಬೈನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ, ಟೊಕಿಯೋ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಸಾಧನೆಯನ್ನು ಮಾಡಿದ್ದ ಭಾರತದ ಜೋಡಿ, ಈ ಟೂರ್ನಿಯಲ್ಲಿ ಬಂಗಾರದ ಪದಕದ ಮೇಲೆ ಕಣ್ಣು ನೆಟ್ಟಿದೆ. ಈ ಜೋಡಿ ಈ ವರ್ಷ ಭರ್ಜರಿ ಪ್ರದರ್ಶನವನ್ನು ನೀಡಿ ಪದಕದ ಬೇಟೆಯನ್ನು ನಡೆಸಿದೆ. ಸ್ವಿಸ್ ಓಪನ್, ಇಂಡೋನೇಷಿಯಾ ಓಪನ್, ಕೊರಿಯಾ ಓಪನ್‌ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತದ ಜೋಡಿ ಇನ್ನೊಂದು ಸಾಧನೆಯ ಸನಿಹಕ್ಕೆ ಹೋಗುತ್ತಿದೆ.
ಮೊದಲ ಗೇಮ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರ ಸವಾಲನ್ನು ಮೀರಿ ನಿಂತ ಭಾರತದ ಜೋಡಿ ಅಂಕಗಳನ್ನು ಕಲೆ ಹಾಕಿತು. ಎರಡನೇ ಗೇಮ್‌ನ ಆರಂಭದಲ್ಲಿ ಕೊಂಚ ಪ್ರತಿರೋಧ ಒಡ್ಡಿದ ಆಸೀಸ್ ಜೋಡಿ, ನಂತರ ಅಂಕಗಳನ್ನು ನೀಡಿ ಕೈ ಸುಟ್ಟುಕೊಂಡಿತು. ಪರಿಣಾಮ ಚಿರಾಗ್ ಜೋಡಿ 30 ನಿಮಿಷದಲ್ಲಿ ಸುಲಭ ಜಯ ಸಾಧಿಸಿತು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಗಾಯತ್ರಿ ಗೋಪಿಚಂದ್ ಹಾಗೂ ತ್ರಿಸಾ ಜೋಡಿ ಅಮೋಘ ಪ್ರದರ್ಶನ ಮುಂದುವರೆಸಿತು. ವಿಶ್ವ ರ‍್ಯಾಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿರುವ ಭಾರತದ ಜೋಡಿ ಚುಂಗ್ ಹಾಗೂ ಯಂಗ್ ಅವರನ್ನು 38 ನಿಮಿಷಗಳ ಆಟದಲ್ಲಿ ಮಣಿಸಿತು. ಭಾರತದ ಜೋಡಿ 21-18, 21-10 ರಿಂದ ಗೇಮ್ ಸುಲಭವಾಗಿ ಗೆದ್ದು ಕೊಂಡಿತು.
ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಆಟ ಕಂಡು ಬಂದಿತು. ಉಭಯ ಜೋಡಿ ಸುಲಭವಾಗಿ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಮೊದಲ ಗೇಮ್‌ನ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಚುಂಗ್ ಜೋಡಿಯ ಆಟದ ತಂತ್ರವನ್ನು ಅರಿತು, ಭಾರತೀಯ ಜೋಡಿ ಆಡಿತು. ಒಂದು ಹಂತದಲ್ಲಿ ಜಿದ್ದಾಜಿದ್ದಿನಿಂದ ನಡೆಯುತ್ತಿದ್ದ ಪಂದ್ಯ ಕೊನೆಯಲ್ಲಿ ಏಕಪಕ್ಷೀಯವಾಯಿತು. ಈ ಗೇಂನ ಯಾವುದೇ ಹಂತದಲ್ಲಿ ಭಾರತದ ಜೋಡಿ ಅಂಕಗಳ ಅಂತರವನ್ನು ಮೊದಲಾರ್ಧದ ಬಳಿಕ ಬಿಟ್ಟು ಕೊಡಲಿಲ್ಲ.
ಎರಡನೇ ಗೇಂ ಆರಂಭದಿಂದಲೂ ಮನಮೋಹಕ ಗ್ಯಾಪ್ ಶಾಟ್ ಹಾಗೂ ಸ್ನ್ಯಾಷ್‌ಗಳನ್ನು ಹೊಡೆದ ಭಾರತದ ಜೋಡಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಅಲ್ಲದೇ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಮುಂದಿನ ಸುತ್ತಿನಲ್ಲಿ ಭಾರತದ ಜೋಡಿ ಟೂರ್ನಿಯ ಅಗ್ರ ಶ್ರೇಯಾಂಕಿತ ಜೋಡಿಯ ವಿರುದ್ಧ ಕಾದಾಟ ನಡೆಸಲಿದೆ. (ಸಾಂದರ್ಭಿಕ ಚಿತ್ರ)