ದೇಶದಲ್ಲೇ ಅತ್ಯುತ್ತಮ ಕ್ರೀಡಾ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ವಿರುದ್ಧ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಜಾಹೀರಾತು ಶುಲ್ಕ ವಂಚನೆ ಪಂಗನಾಮ ಹಾಕಿದ ಆರೋಪ ಕೇಳಿಬಂದಿದೆ.
ಆರ್‌ಟಿಐ ಕಾರ್ಯಕರ್ತ ಅಮರೇಶ್ ಅವರು, ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತರಿಗೆ ಪತ್ರ ಬರೆದಿದ್ದರು. ಆಗ ಕಳೆದ ಹತ್ತು ವರ್ಷಗಳಿಂದ ಜಾಹೀರಾತು ಶುಲ್ಕ ಕಟ್ಟದೇ ಕೆಎಸ್‌ಸಿಎ ನೂರಾರು ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರತಿ ಪಂದ್ಯ ನಡೆಯುವಾಗ ವಿವಿಧ ಸಂಸ್ಥೆ, ಬ್ರ್ಯಾಂಡ್‌ಗಳ ಜಾಹೀರಾತು ಪ್ರದರ್ಶನವಾಗುತ್ತದೆ. ಈ ವೇಳೆ ಬೆಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸಾಮಾನ್ಯವಾಗಿ ಜಾಹೀರಾತು ಶುಲ್ಕ ಪಾವತಿಸಬೇಕಿರುತ್ತದೆ.
ನೂರಾರು ಕೋಟಿ ರೂಪಾಯಿ ಜಾಹೀರಾತು ಫಲಕ ಪ್ರದರ್ಶಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಭಾರೀ ಮೊತ್ತದ ಹಣ ಸಂಗ್ರಹಿಸಿರುತ್ತದೆ. ಆದರೂ, ಕಳೆದ ಹತ್ತು ವರ್ಷಗಳಿಂದ ಇದುವರೆಗೆ ಪಾಲಿಕೆಗೆ ನಯಾ ಪೈಸೆ ಶುಲ್ಕ ಕಟ್ಟದೆ ಕೆಎಸ್‌ಸಿಎ ಶುಲ್ಕ ಬಾಕಿ ಉಳಿಸಿಕೊಂಡಿದೆ.

ಇದೇ ವೇಳೆ, ಕೆಎಸ್‌ಸಿಎ ದೊಡ್ಡ ಮೊತ್ತದ ಜಾಹಿರಾತು ಶುಲ್ಕ ಕಟ್ಟದಿದ್ದರೂ, ಬಿಬಿಎಂಪಿ ಡಿಮ್ಯಾಂಡ್ ನೋಟಿಸ್ ಕೂಡ ನೀಡದಿರುವ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಬೆಂಗಳೂರಿನಲ್ಲಿ ಮನೆ ಕಂದಾಯ ಕಟ್ಟದಿದ್ದರೆ ಮನೆ ಮುಂದೆ ಬಂದು ನಿಲ್ಲುವ ಬಿಬಿಎಂಪಿ ಅಧಿಕಾರಿಗಳು, ಜವಾಬ್ದಾರಿ ಹೊತ್ತ ಬಿಬಿಎಂಪಿ ಕಂದಾಯ ವಿಭಾಗ ಡಿಮ್ಯಾಂಡ್ ನೋಟಿಸ್ ಸಹ ಜಾರಿ ಮಾಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಐಸಿಸಿ ವಿಶ್ವಕಪ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಕೆಎಸ್‌ಸಿಎಗೆ ಜಾಹೀರಾತು ಶುಲ್ಕ ಕಟ್ಟಬೇಕು ಎಂಬ ಪರಿಜ್ಞಾನವಿಲ್ಲದೆ ಕುಳಿತಿದೆ. ಜಾಹಿರಾತು ಶುಲ್ಕ ಕಟ್ಟಬೇಕು ಎಂಬುದು ಗೊತ್ತಿದ್ದರೂ, ಜಾಹಿರಾತು ಶುಲ್ಕ ಕಟ್ಟದೇ ಕೆಎಸ್‌ಸಿಎ ತಪ್ಪು ಮಾಡಿದೆ.
ಲೋಕಾಯುಕ್ತಕ್ಕೆ ನೀವೇ ದೂರು ನೀಡಿ ಅಂತ ಆರ್‌ಟಿಐ ಕಾರ್ಯಕರ್ತ ಎಸ್. ಅಮರೇಶ್ ಆಗ್ರಹಪಡಿಸಿದ್ದಾರೆ.