ಚಾಮರಾಜನಗರ, ಜೂನ್ 16: ಚಾಮರಾಜನಗರದ ಮೈಸೂರು ರಸ್ತೆಯಲ್ಲಿರುವ ಈಶ್ವರಿ ಟ್ರಾಕ್ಟರ್ ಶೋ ರೂಂನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮಹೀಂದ್ರ ಕಂಪನಿ ಟ್ರಾಕ್ಟರ್ ಖರೀದಿಸಿದ್ದಾರೆ.
ಬಳಿಕ ಶೋರೂಂ ವತಿಯಿಂದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ನಮ್ಮ ಪೂರ್ವಿಕರು ಕೃಷಿಕರಲ್ಲ. ಆದರೆ, ನಾನು ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದಲ್ಲಿ ಜಮೀನು ಖರೀದಿಸಿದ್ದೇನೆ. ಕೃಷಿ ಚಟುವಟಿಕೆಗಾಗಿ ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿ ಮಾಡಲಾಗಿದೆ," ಎಂದರು.

ಚಾಮರಾಜನಗರದ ಈಶ್ವರಿ ಟಾಕ್ಟರ್ ಶೋರೂಂ ಪಾಲುದಾರರಾದ ಅಶೋಕ್, ಜಿ. ಪ್ರಶಾಂತ್ ಮಾತನಾಡಿ, "ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ನಮ್ಮ ಶೋರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿರುವುದು ತುಂಬಾ ಖುಷಿ ತಂದಿದೆ," ಎಂದರು.
ಈ ಸಂದರ್ಭದಲ್ಲಿ ಮಹೀಂದ್ರಾ ಟ್ರಾಕ್ಟರ್ ಕಂಪನಿಯ ರಾಜ್ಯ ಮುಖ್ಯಸ್ಥರಾದ ಅರವಿಂದ್ ಪಾಂಡೆ ಇದ್ದರು. ಅರವಿಂದ್ ಪಾಂಡೆ ಅವರೇ ರೋಜರ್ ಬಿನ್ನಿ ಅವರಿಗೆ ಟ್ರಾಕ್ಟರ್ ಕೀ ಹಸ್ತಾಂತರ ಮಾಡಿದರು.
2022ರ ಅಕ್ಟೋಬರ್ 18ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಯಲ್ಲಿ ಕರ್ನಾಟಕ ಮೂಲದ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಭಾರತ ತಂಡದ ಪರ ಎರಡು ವಿಶ್ವಕಪ್ ಪ್ರತಿನಿಧಿಸಿರುವ ರೋಜರ್ ಬಿನ್ನಿ ಅವರು ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಭಾರತದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದರು.
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, 27 ಟೆಸ್ಟ್ ಪಂದ್ಯಗಳು ಮತ್ತು 72 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 1979ರಿಂದ 1987ರವರೆಗೆ ಭಾರತ ತಂಡದ ಪರ ಕ್ರಿಕೆಟ್ ಆಡಿದ್ದಾರೆ.