ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗರೊಬ್ಬರ ವೈದ್ಯಕೀಯ ಚಿಕಿತ್ಸೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೆರವು ನೀಡಲು ಮುಂದಾಗಿದೆ.
ಪ್ರಸ್ತುತ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿರಿಯ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ಗೆ ಆರ್ಥಿಕ ನೆರವು ನೀಡಲು ತಕ್ಷಣವೇ 1 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆ ನೀಡಿದ್ದಾರೆ.

ಕಳೆದ ವರ್ಷದಿಂದ ತಮ್ಮ ಅನಾರೋಗ್ಯದ ವಿರುದ್ಧ ಮೌನವಾಗಿ ಹೋರಾಡುತ್ತಿರುವ 71 ವರ್ಷ ವಯಸ್ಸಿನ ಮಾಜಿ ಕ್ರಿಕೆಟಿಗನಿಗೆ ಈ ನೆರವು ಭರವಸೆಯ ಕಿರಣವಾಗಿದೆ.
ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು ತಮ್ಮ ಮಿಡ್-ಡೇ ಅಂಕಣದಲ್ಲಿ ಅಂಶುಮಾನ್ ಗಾಯಕ್ವಾಡ್ ಅವರನ್ನು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೆ ಎಂದು ಬಹಿರಂಗಪಡಿಸಿದಾಗ ಅಂಶುಮಾನ್ ಗಾಯಕ್ವಾಡ್ ಅವರ ಅನಾರೋಗ್ಯ ಪರಿಸ್ಥಿತಿ ಬೆಳಕಿಗೆ ಬಂದಿತು.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಂಶುಮಾನ್ ಗಾಯಕ್ವಾಡ್ ಅವರ ಅನಾರೋಗ್ಯ ಬಹಿರಂಗಗೊಂಡ ನಂತರ, ಭಾರತ ತಂಡದ ಮಾಜಿ ಆಟಗಾರರ ಬಗ್ಗೆ, ವಿಶೇಷವಾಗಿ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವವರ ಬಗ್ಗೆ ಬಿಸಿಸಿಐ ಜವಾಬ್ದಾರಿಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು.

ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಕೂಡ ಅಂಶುಮಾನ್ ಗಾಯಕ್ವಾಡ್ ಅವರ ವೈದ್ಯಕೀಯ ನೆರವಿಗೆ ಧನಸಹಾಯ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು.
1983ರ ವಿಶ್ವಕಪ್ ವಿಜೇತ ಭಾರತೀಯ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ಸಹಾಯ ಮಾಡಲು ತಮ್ಮ ಪಿಂಚಣಿಯನ್ನು ನೀಡಲು ನಿರ್ಧರಿಸಿದ್ದರು.
ಕಪಿಲ್ ದೇವ್ ಮಾಜಿ ಆಟಗಾರರಿಗೆ ಸಹಾಯ ಮಾಡಲು ಸರಿಯಾದ ವ್ಯವಸ್ಥೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಪ್ರಸ್ತುತ ಆಟಗಾರರು ಉತ್ತಮ ಪರಿಹಾರವನ್ನು ಪಡೆಯುತ್ತಿದ್ದರೂ, ಹಿಂದಿನ ತಲೆಮಾರುಗಳ ಆಟಗಾರರಿಗೆ ಈ ವ್ಯವಸ್ಥೆ ಇರಲಿಲ್ಲ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವೈಯಕ್ತಿಕವಾಗಿ ಅಂಶುಮಾನ್ ಗಾಯಕ್ವಾಡ್ ಅವರ ಕುಟುಂಬವನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ತಿಳಿದುಕೊಂಡರು ಮತ್ತು ಆರ್ಥಿಕ ಸಹಾಯವನ್ನು ನೀಡಿದರು. ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ಕ್ರಿಕೆಟ್ ಪ್ರಯಾಣವು ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ.
ಈ ಹಿಂದೆ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಅವರು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಅವರೊಂದಿಗೆ ಮಾತನಾಡಿದ್ದು, ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳು ಮತ್ತು ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿರುವ ಅಂಶುಮಾನ್ ಗಾಯಕ್ವಾಡ್ 32.08ರ ಪ್ರಭಾವಶಾಲಿ ಸರಾಸರಿಯಲ್ಲಿ ಅತ್ಯಧಿಕ ಸ್ಕೋರ್ 201 ರನ್ ಸೇರಿದಂತೆ 1,959 ರನ್ ಗಳಿಸಿದರು.
ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ 2000ರಿಂದ 2001ರವರೆಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು ಮತ್ತು 1999ರ ವಿಶ್ವಕಪ್‌ನಲ್ಲಿ ಕೀನ್ಯಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದರು.