ಅಂದು ಮಾಡೆಲ್‌, ಇಂದು ವಿಶ್ವ ಚಾಂಪಿಯನ್‌, ಕನ್ನಡತಿ ಐಶ್ವರ್ಯ ಯಶೋಗಾತೆ

Bengaluru Girl Aishwarya Pissay 2019

ಬೆಂಗಳೂರು, ಆಗಸ್ಟ್‌ 12: ಮೋಟಾರ್‌ ಸ್ಪೋರ್ಟ್ಸ್‌, ಮೈ ನವಿರೇಳಿಸುವ ಸಾಹಸಮಯ ಕ್ರೀಡೆಯಲ್ಲಿ ಪುರುಷರ ಪ್ರಾಬಲ್ಯವೇ ಹೆಚ್ಚು. ಇಂತಹ ಪುರುಷ ಪ್ರಧಾನ ಕ್ರೀಡೆಯಲ್ಲಿ ಬೆಂಗಳೂರಿನ ಮಹಿಳಾ ರೇಸರ್‌ ಐಶ್ವರ್ಯ ಪಿಸೇ ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನಲ್ಲಿ ಪಾಲ್ಗೊಂಡು ಪ್ರಶಸ್ತಿ ಕೂಡ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಪ್ರಪ್ರಥಮ ಮಹಿಳೆ ಎಂಬ ಇತಿಹಾಸ ಬರೆದಿದ್ದಾರೆ.

ಅಂದಹಾಗೆ ಮೋಟಾರ್‌ ಸ್ಪೋಟ್ಸ್‌ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ದೇಶದ ಅಪ್ರತಿಮ ಬೈಕ್‌ ರೈಡರ್‌ಗಳು ಮೂಡಿ ಬಂದಿರುವುದು ಕರುನಾಡ ಮಣ್ಣಿಂದ ಎಂಬುದು ವಿಶೇಷ. ವಿಶ್ವದ ಅತ್ಯಂತ ಕಠಿಣ ಮೋಟಾರ್‌ ಸ್ಪೋರ್ಟ್ಸ್‌ ರಾಲಿ ರೇಸ್‌ ಆಗಿರುವ ಡಕಾರ್‌ ರೇಸ್‌ ಪೂರೈಸಿದ್ದ ಇಬ್ಬರೇ ಇಬ್ಬರು ಭಾರತೀಯರು ಕನ್ನಡಿಗರು ಎಂಬುದು ಹೆಮ್ಮೆಯ ಸಂಗತಿ. ಬೆಂಗಳೂರಿಗ ಸಿ.ಎಸ್‌ ಸಂತೋಷ್‌ ಮತ್ತು ಉಡುಪಿಯ ಕೆ.ಪಿ ಅರವಿಂದ್‌ ಈ ಸಾಧನೆ ಮೆರೆದ ಭೂಪರಾಗಿದ್ದಾರೆ. ಈ ದಿಗ್ಗಜರ ಸಾಲಿಗೆ ಈಗ ಐಶ್ವರ್ಯ ಹೆಸರು ಹೊಸದಾಗಿ ಸೇರ್ಪಡೆಯಾಗಲಿದೆ.

ಐಪಿಎಲ್‌ 2020: ಡೆಲ್ಲಿ ಕ್ಯಾಪಿಟಲ್ಸ್‌ ಸೇರಲಿದ್ದಾರಂತೆ ರಾಯಲ್ಸ್‌ನ ಅಜಿಂಕ್ಯ ರಹಾನೆ!

ಬೆಂಗಳೂರಿನವರಾದ 23 ವರ್ಷದ ರೈಡರ್‌ ಐಶ್ವರ್ಯ, ಇದೇ ಭಾನುವಾರ ಹಂಗರಿಯಲ್ಲಿ ಅಂತ್ಯಗೊಂಡ ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ನಾಲ್ಕು ಹಂತದ ರಾಲಿ ರೇಸ್‌ನಲ್ಲಿ ಐಶ್ವರ್ಯ ಕಿರಿಯರ ಸಮಗ್ರ ವಿಭಾಗದಲ್ಲೂ ನಾಲ್ಕನೇ ಸ್ಥಾನ ಪಡೆದು ಮಿಂಚಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾಡೆಲಿಂಗ್‌ ಕ್ಷೇತ್ರದಲ್ಲೂ ಮಿಂಚಿದ್ದ ಬೆಂಗಳೂರಿನ ಬೆಡಗಿ, ತಮ್ಮ 17ನೇ ವಯಸ್ಸಿಗೇ ರೈಡಿಂಗ್‌ ಕಲಿತು ಆರು ವರ್ಷಗಳಲ್ಲಿ ವಿಶ್ವ ಕಪ್‌ಗೆದ್ದ ಸಾಧನೆ ಮಾಡಿದ್ದಾರೆ.

ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!

ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನ ಮೊದಲ ರೇಸ್‌ ದುಬೈನಲ್ಲಿ ನಡೆದು ಅದರಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಐಶ್ವರ್ಯ, ಬಳಿಕ ಪೋರ್ಚುಗಲ್‌ನಲ್ಲಿ ನಡೆದ 2ನೇ ಸುತ್ತಿನಲ್ಲಿ 3ನೇ ಹಾಗೂ ಸ್ಪೇನ್‌ನಲ್ಲಿ ನಡೆದ ರೇಸ್‌ನಲ್ಲಿ 5ನೇ ಮತ್ತು ಹಂಗರಿಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಒಟ್ಟಾರೆ 65 ಅಂಕಗಳನ್ನು ಗಳಿಸುವ ಮೂಲಕ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ ರೈಡರ್‌ ಆಗಿ ಹೊರಹೊಮ್ಮಿದರು. ಕೇವಲ 4 ಅಂಕಗಳ ಹಿನ್ನಡೆ ಅನುಭವಿಸಿದ ಪೋರ್ಚುಗಲ್‌ನ ಮಹಿಳಾ ರೈಡರ್‌ ರೀಟಾ ವಿಯೆರಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!

"ವಿಶ್ವಕಪ್‌ ಗೆಲುವು ನಿಜಕ್ಕೂ ಬಹುದೊಡ್ಡದು. ಇಲ್ಲಿ ಸಿಕ್ಕ ಅನುಭವದಿಂದ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇನೆ. ವಿಶ್ವದ ಅತ್ಯಂತ ಕಠಿಣ ಮೋಟಾರ್‌ ಸ್ಪೋರ್ಟ್ಸ್‌ ರಾಲಿ ರೇಸ್‌ ಆಗಿರು ಡಕಾರ್‌ನಲ್ಲಿ ಪಾಲ್ಗೊಳ್ಳುವುದು ನನ್ನ ಕನಸು. ಈ ಗುರಿ ಸಾಧನೆಗೆ ಮತ್ತಷ್ಟು ಪ್ರಾಯೋಜಕತ್ವ ನನ್ನ ಕೈ ಹಿಡಿಯುತ್ತದೆ ಎಂದು ಆಶಿಸುತ್ತೇನೆ. ಏನೇ ಆಗಲಿ ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುತ್ತೇನೆಂಬ ಛಲ ನನ್ನಲ್ಲಿದೆ," ಎಂದು ವಿಶ್ವಕಪ್‌ ಗೆಲುವಿನ ಬಳಿಕ ಐಶ್ವರ್ಯ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೂಳೆ ಮುರಿದರೂ ಕುಗ್ಗದ ಆತ್ಮವಿಶ್ವಾಸ

2016ರಲ್ಲಿ ಮೋಟಾರ್‌ ಸ್ಪೋರ್ಟ್ಸ್‌ ಅಖಾಡಕ್ಕೆ ಧುಮುಕಿದ ಯುವ ಪ್ರತಿಭೆ ಐಶ್ವರ್ಯ, ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ದಕ್ಷಿಣ್‌ ಡೇರ್‌ ರಾಲಿಯ ಮಹಿಳಾ ವಿಭಾಗದ ಚಾಂಪಿಯನ್‌ ಎನಿಸಿದರು. ಅಂದಿನಿಂದ ಇಂದಿನವರೆಗೂ ಐಶ್ವರ್ಯ ನಡೆದು ಬಂದ ಹಾದಿ ಭಾರತೀಯ ಮೋಟಾರ್‌ ಸ್ಪೋಟ್ಸ್‌ನಲ್ಲಿ ಇತಿಹಾಸದಲ್ಲಿ ನವ ಅಧ್ಯಾಯವಾಗಿದೆ. 2017ರಲ್ಲಿ ಅಪಘಾತವೊಂದರಲ್ಲಿ ಐಶ್ವರ್ಯ ಅವರ ಭುಜದ ಮೂಳೆ ಮುರಿದಿತ್ತು. ಆದರೂ, ರಾಷ್ಟ್ರೀಯ ರೋಡ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ ಹತ್ತಿರವಿದ್ದ ಕಾರಣ ಕೇವಲ 2 ವಾರಗಳ ಅಂತರದಲ್ಲಿ ಚೇತರಿಸಿ ಕಾಲರ್‌ ಬೋನ್‌ಗೆ 7 ಸ್ಕ್ರೂ ಹಾಕಿರುವ ನೋವಿನ ನಡುವೆಯೂ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದು ಸಮಗ್ರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ್ದರು. ರಾಷ್ಟ್ರೀಯ ರೋಡ್‌ರೇಸಿಂಗ್‌ ಮತ್ತು ನ್ಯಾಷನಲ್‌ ಕ್ರಾಸ್‌ಕಂಟ್ರಿ ರಾಲಿ ಚಾಂಪಿಯನ್‌ಷಿಪ್‌ ಎರಡರಲ್ಲೂ ಒಂದೇ ವರ್ಷ ಚಾಂಪಿಯನ್‌ ಪಟ್ಟ ಪಡೆದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದರು. ಇದಾದ ಎರಡು ವರ್ಷಗಳ ತರುವಾಯ ವಿಶ್ವಕಪ್‌ ಗೆದ್ದು ಇತಿಹಾಸ ವರೆದಿದ್ದಾರೆ.

ಮಾಡೆಲಿಂಗ್‌ನಲ್ಲೂ ರಂಗು

ಕನ್ನಡತಿ ಐಶ್ವರ್ಯ, ಬೈಕ್‌ ರೇಸಿಂಗ್‌ನಲ್ಲಿ ವೃತ್ತಿಬದುಕು ರೂಪಿಸಿಕೊಳ್ಳುವುದಕ್ಕು ಮುನ್ನ ಮಾಡೆಲಿಂಗ್‌ನಲ್ಲೂ ಮಿಂಚಿದ್ದರು. 5.9 ಅಡಿ ಎತ್ತರದ ಚೆಲುವೆ ಪ್ರತಿಷಿತ ಬ್ರಾಂಡ್‌ಗಳಾದ ಮೋರ್ಗಾ, ಝಾರಾ ಹಾಗೂ ಕ್ಯಾಸಾಪಿಕಾಸದಲ್ಲಿ ರೂಪದರ್ಶಿಯಾಗಿ ಕಂಗೊಳಿಸಿದ್ದರು. ಬಹುಮುಖ ಪ್ರತಿಭೆಯಾಗಿರುವ ಐಶ್ವರ್ಯ ಫ್ಯಾಷನ್‌ ಡಿಸೈನಿಂಗ್‌ನಲ್ಲೂ ಪರಿಣತರಾಗಿದ್ದಾರೆ.

ಐಶ್ವರ್ಯಪ್ರಮುಖ ಸಾಧನೆಗಳು

* ಬಹು ಬಾರಿ ದಕ್ಷಿಣ್‌ ಡೇರ್‌ ರಾಲಿ ಚಾಂಪಿಯನ್‌.

* ಕ್ರಾಸ್‌ ಕಂಟ್ರಿ ರಾಲಿ ಮತ್ತು ರೋಡ್‌ ರೇಸಿಂಗ್‌ನಲ್ಲಿಒಂದೇ ವರ್ಷ ಚಾಂಪಿಯನ್ ಪಟ್ಟ.

* ಅಂತಾರಾಷ್ಟ್ರೀಯ ರಾಲಿ ರೇಸ್‌ಗಳಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ಮಹಿಳೆ.

* ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನಲ್ಲಿ ಚಾಂಪಿಯನ್‌.

* ಮೋಟಾರ್‌ ಸ್ಪೋರ್ಟ್ಸ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.

ರಾಲಿಪಟು ವಿಶ್ವಾಸ್‌ ಗುರು

ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ರಾಲಿ ಚಾಂಪಿಯನ್‌ಷಿಪ್‌ನಲ್ಲಿ ಟೈರ್‌ ಪಂಚರ್‌ ಆದರು ರೇಸ್‌ ಪೂರೈಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಅನುಭವಿ ರೇಸರ್‌ ವಿಶ್ವಾಸ್‌ ಎಸ್‌.ಡಿ, ಐಶ್ವರ್ಯ ಪಿಸೇ ಅವರನನ್ನು ಒಳಗೊಂಡಂತೆ ಹಲವು ಯುವ ಉದಯೋನ್ಮುಖ ರೈಡರ್‌ಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. 2016ರಲ್ಲಿ ಐಶ್ವರ್ಯ ಪಿಸೇ ದಕ್ಷಿಣ್‌ ಡೇರ್‌ ರಾಲಿ ಗೆದ್ದು, ಮೋಟಾರ್‌ಸ್ಪೋರ್ಟ್ಸ್‌ ವೃತ್ತಿ ಬದುಕಿಗೆ ಭರ್ಜರಿ ಎಂಟ್ರಿ ನೀಡಿದ್ದರ ಹಿಂದೆ ವಿಶ್ವಾಸ್‌ ಅವರ ಪಾತ್ರ ಮಹತ್ವದ್ದು. ಐಶ್ವರ್ಯಗೆ ರಾಲಿ ರೇಸ್‌ಗಳಲ್ಲಿ ಬೈಕ್‌ ಓಡಿಸುವ ಕಲೆಯ ಪಾಠ ಹೇಳಿಕೊಟ್ಟಿದ್ದು ವಿಶ್ವಾಸ್‌. ಮಹಿಳೆಯರು ಕೂಡ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಮಿಂಚಬಲ್ಲರು ಎಂಬುದನ್ನು ಅರಿತು ಹಲವರಿಗೆ ವಿಶ್ವಾಸ್‌ ಉಚಿತವಾಗಿ ಮಾರ್ಗದರ್ಶನ ನೀಡಿದ್ದಾರೆ. ಇಂದು ಐಶ್ವರ್ಯ ಅವರ ಐತಿಹಾಸಿಕ ಸಾಧನೆಯ ಶ್ರೇಯಸ್ಸು ವಿಶ್ವಾಸ್‌ ಅವರಂತಹ ಗುರುಗಳಿಗೂ ಲಭ್ಯವಾಗುತ್ತದೆ.

For Quick Alerts
ALLOW NOTIFICATIONS
For Daily Alerts

Story first published: Monday, August 12, 2019, 20:14 [IST]
Other articles published on Aug 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more