ರಾಜ್ಯ ಮಹಿಳಾ ಪೋಲಿಸ್ ಕ್ರೀಡಾಪಟುಗಳಿಗೆ ಇಂಥ ಸ್ಥಿತಿ ಬಂದಿದ್ದೇಕೆ?
ಬೆಂಗಳೂರು, ಮೇ 09: ಕರ್ನಾಟಕ ರಾಜ್ಯ ಮಹಿಳಾ ಕ್ರೀಡಾ ತಂಡವೊಂದು ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸೀಟು ಸಿಗದೆ ರೈಲಿನ ಶೌಚಗೃಹದ ಬಾಗಿಲಲ್ಲಿ ಕುಳಿತು ಪ್ರಯಾಣ ಮಾಡಿರುವ ಫೋಟೋಗಳನ್ನು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ಹಂಚಿಕೊಂಡಿದ್ದು, ಈ ಘಟನೆ ಬಗ್ಗೆ ಅನೇಕ ಮಂದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಕ್ರೀಡಾಪಟುಗಳ ಈ ದುಃಸ್ಥಿತಿಯ ಬಗ್ಗೆ ವಾಟ್ಸಪ್ ಮೂಲಕ ನನಗೆ ಬಂದ ಸಂದೇಶ ಹೀಗಿದೆ ಎಂದು ಮಹಿಳಾ ಕ್ರೀಡಾಪಟುಗಳ ಶೋಚನೀಯ ಸ್ಥಿತಿಗೆ ಶಾಸಕ ಮತ್ತು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ವ್ಯಥೆ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು.

ಏನಿದು ಘಟನೆ: ಕಲಬುರಗಿಯಲ್ಲಿ ಆಯೋಜನೆಗೊಂಡಿದ್ದ ಪೊಲೀಸ್ ಕ್ರೀಡಾಕೂಟದಲ್ಲಿ ಬೆಂಗಳೂರಿನಿಂದ ತೆರಳಿದ್ದ ಮಹಿಳಾ ಪೇದೆಗಳಿಗೆ ಸೀಟು ಸಿಗದ ಕಾರಣ ಶೌಚಗೃಹದ ಬಳಿ ಕುಳಿತು ಪ್ರಯಾಣಿಸಿದ್ದರು. ಟಿಕೆಟ್ ಕಾಯ್ದಿರಿಸುವುದರಲ್ಲಿ ಆದ ಲೋಪದಿಂದ ಸರಿಯಾದ ಸ್ಥಳ ಸಿಗದೆ ಪರದಾಡಿದ ಮಹಿಳೆಯರು, ಬೇರೆ ಜಾಗ ಹಾಗೂ ವಿಧಿ ಇಲ್ಲದೆ, ಶೌಚಗೃಹದ ಬಳಿಯಲ್ಲೇ ನಿದ್ರಿಸಬೇಕಾಯಿತು.
ಕ್ರೀಡಾಕೂಟಕ್ಕೆ ತೆರಳುವಾಗ ಶೌಚಗೃಹದ ಬಳಿ ಅವರು ಪ್ರಯಾಣ ಮಾಡಬೇಕಾದ ಅವಸ್ಥೆಯನ್ನೊಮ್ಮೆ ನೋಡಿ. ಗೆದ್ದು ಪೊಲೀಸ್ ಇಲಾಖೆಗೆ ಗೌರವ ತಂದುಕೊಡಬಲ್ಲ ಈ ಕ್ರೀಡಾಪಟುಗಳಿಗೆ ಸ್ಲೀಪರ್ ಕೋಚ್ನಲ್ಲಿ ಹೋಗಲು ವ್ಯವಸ್ಥೆ ಮಾಡಿಕೊಡಲಾಗದೇ ಇಲಾಖೆ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸುರೇಶ್ ಕುಮಾರ್ ಕೇಳಿದ್ದಾರೆ.
ಎಡಿಜಿಪಿ (ಆಡಳಿತ) ಕಮಲ್ ಪಂಥ್ ಅವರು ಪ್ರತಿಕ್ರಿಯಿಸಿ, ನಮ್ಮ ಇಲಾಖೆಗೆ ಟಿಕೆಟ್ ಖರೀದಿಸುವ ಸಾಮರ್ಥ್ಯವಿದೆ. ನಮ್ಮ ಕ್ರೀಡಾಪಟುಗಳನ್ನು ಇಂಥ ಸ್ಥಿತಿಗೆ ಎಂದಿಗೂ ದೂಡುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications