2024ರ ಲೋಕಸಭೆ ಚುನಾವಣೆಗೂ ಮುನ್ನ ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ದೆಹಲಿಯಲ್ಲಿ ಹಾಲಿ ಸಂಸದರಾಗಿದ್ದರೂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣವೆನೆಂದು ತಿಳಿಯಿರಿ.

ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ, ಗೌತಮ್ ಗಂಭೀರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ.
ಗೌತಮ್ ಗಂಭೀರ್ ಅವರು 2024ರ ಐಪಿಎಲ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿ ತಮ್ಮ ಹುದ್ದೆಯನ್ನು ಪ್ರಾರಂಭಿಸುತ್ತಿದ್ದಂತೆ, ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಬಿಜೆಪಿಗೆ ಕೇಳಿಕೊಂಡಿದ್ದಾರೆ.
ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ, ಗೌತಮ್ ಗಂಭೀರ್ ಅವರು ತಮ್ಮ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸಲು ತಮ್ಮ ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಬಿಜೆಪಿ ಅಧ್ಯಕ್ಷರನ್ನು ಕೇಳಿಕೊಂಡಿದ್ದಾರೆ. ಇದೇ ವೇಳೆ ಜನರಿಗೆ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಗೌತಮ್ ಗಂಭೀರ್ ಧನ್ಯವಾದ ತಿಳಿಸಿದರು.
"ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಪಕ್ಷದ ಗೌರವಾನ್ವಿತ ಅಧ್ಯಕ್ಷ ಜೆಪಿ ನಡ್ಡಾ ಜೀ ಅವರನ್ನು ವಿನಂತಿಸಿದ್ದೇನೆ. ಇದರಿಂದ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸಬಹುದು. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜೈ ಹಿಂದ್!," ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗೌತಮ್ ಗಂಭೀರ್ ಅವರ ನಿರ್ಧಾರವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನೂತನ ಮೆಂಟರ್ ಆಗಿ ಮರಳುವ ಕೆಲವೇ ದಿನಗಳ ಮೊದಲು ಈ ನಿರ್ಧಾರ ಬಂದಿದೆ. ಕೆಕೆಆರ್ ತಂಡಕ್ಕಾಗಿ ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ.
ಗೌತಮ್ ಗಂಭೀರ್ ಅವರು 2011ರಿಂದ 17ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ನಾಯಕರಾಗಿದ್ದರು ಮತ್ತು 2012 ಮತ್ತು 2014ರಲ್ಲಿ ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದರು. ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಮರಳುವ ಘೋಷಣೆಯನ್ನು ನವೆಂಬರ್ 21, 2023ರಂದು ಅಧಿಕೃತಗೊಳಿಸಲಾಯಿತು.

"ಗೌತಮ್ ಗಂಭೀರ್ ಕೆಕೆಆರ್‌ಗೆ 'ಮೆಂಟರ್' ಆಗಿ ಮರಳುತ್ತಾರೆ ಮತ್ತು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಕೈಜೋಡಿಸಲಿದ್ದಾರೆ,'' ಎಂದು ಕೆಕೆಆರ್ ಪ್ರಕಟಣೆಯಲ್ಲಿ ತಿಳಿಸಿತ್ತು.
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ 2022 ಮತ್ತು 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದರು.
ಎರಡೂ ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ಸ್‌ಗೆ ಮುನ್ನಡೆಯುವುದನ್ನು ಗೌತಮ್ ಗಂಭೀರ್ ಮೇಲ್ವಿಚಾರಣೆ ಮಾಡಿದರು ಮತ್ತು ಅವರ ಬ್ಯಾಕ್‌ರೂಮ್ ಸಿಬ್ಬಂದಿಯಲ್ಲಿ ಅವಿಭಾಜ್ಯ ಅಂಗವಾಗಿದ್ದರು.
ಕೆಕೆಆರ್ ತಂಡ ಮಾರ್ಚ್ 23ರಂದು ಕೋಲ್ಕತ್ತಾದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿರುವಾಗ ತನ್ನ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿದೆ. ಟೂರ್ನಿಯ ಮೊದಲ ಹಂತದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಮೂರು ಪಂದ್ಯಗಳನ್ನು ಆಡಲಿದೆ.