
ನವದೆಹಲಿ, ನವೆಂಬರ್ 19: ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ವಿಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಸೋಮವಾರಕ್ಕೆ (ನವೆಂಬರ್ 19) ಭಾರತದ ಒಟ್ಟು 8 ಮಹಿಳಾ ಬಾಕ್ಸರ್ ಗಳು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಸೋನಿಯಾ ಚಾಹಲ್ (57 ಕೆಜಿ ವಿಭಾಗ), ಸಿಮ್ರನ್‌ಜಿತ್ ಕೌರ್ (64 ಕೆಜಿ) ಸೋಮವಾರ (ನ.19) ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಯಿಸುವ ಮೂಲಕ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಮತ್ತೊಂದು ಸ್ಪರ್ಧೆಯಲ್ಲಿ ಸವೀತಿ ಬೂರಾ (75 ಕೆಜಿ) ಸೋಲುವ ಮೂಲಕ ಪಂದ್ಯಾಟದಿಂದ ಹೊರಬಿದ್ದರು.
ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ (48 ಕೆಜಿ), ಮನೀಷಾ ಮೌನ್ (69 ಕೆಜಿ) ಮತ್ತು ಕಚಾರಿ ಭಾಗ್ಯವತಿ ಅವರು ಭಾನುವಾರ (ನವೆಂಬರ್ 18) ನಡೆದ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾಗಿದೆ. ಭಾರತದ ಮತ್ತೊಬ್ಬ ಬಾಕ್ಸರ್ ಸೀಮಾ ಪೂನಿಯಾ ಕೂಡ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.