ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಶಟ್ಲರ್ ಎಚ್ಎಸ್ ಪ್ರಣಯ್ ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದಾರೆ, ಆ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ 5ನೇ ಷಟ್ಲರ್ ಎಂಬ ಹೆಗ್ಗಳಿಕಗೆ ಇವರು ಪಾತ್ರರಾಗಿದ್ದಾರೆ.
ಶನಿವಾರ (ಆ 26) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪ್ರಣಯ್ 21-18, 13-21, 14-21 ರಿಂದ ಥಾಯ್ಲೆಂಡ್ ದೇಶದ ಕುನ್ಲವುಟ್ ವಿತಿಸರನ್ ಅವರ ವಿರುದ್ಧ ಸೋಲು ಕಂಡರು. ಪ್ರಣಯ್ ಮೊದಲ ಗೇಮ್ ಅನ್ನು 21-18 ಅಂತರದಿಂದ ಗೆದ್ದರು, ಆದರೆ ವಿತಿಸರನ್ ಕೊನೆಯ ಎರಡು ಗೇಂಗಳನ್ನು 13-21, 14-21 ರಿಂದ ಗೆದ್ದು ಫೈನಲ್ ಪ್ರವೇಶಿಸಿದರು.

ಪುರುಷರ ಸಿಂಗಲ್ಸ್ ಸೆಮಿಫೈನಲ್ ನಲ್ಲಿ ಪ್ರಣಯ್ ತೀವ್ರ ಹೋರಾಟ ನಡೆಸಬೇಕಾಯಿತು. ಅವರು ಮೊದಲ ಗೇಮ್ ನಲ್ಲಿ ಆಕ್ರಮಣಕಾರಿ ಆಟವನ್ನು ಅನುಸರಿಸಿದರು. ಅಲ್ಲದೆ ಎದುರಾಳಿಗೆ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ತಮ್ಮ ಆಕ್ರಮಣಕಾರಿ ಆಟದಿಂದ ಪ್ರಣಯ್ ಮೊದಲ ಸೆಟ್ ಅನ್ನು 21-18 ಅಂತರದಿಂದ ಗೆದ್ದುಕೊಂಡರು.
ಎರಡನೇ ಗೇಮ್ ನಲ್ಲಿ, ಪ್ರಣಯ್ ಒಂದು ಹಂತದಲ್ಲಿ 6-1 ರಿಂದ ಮುನ್ನಡೆಯಲ್ಲಿದ್ದರು, ಆದರೆ ವಿತಿಸರಣ್ ನಿಧಾನವಾಗಿ ಅಂಕಗಳನ್ನು ಬಾಚಿಕೊಳ್ಳುತ್ತಾ ಸಾಗಿ, ಸತತ ಐದು ಅಂಕಗಳನ್ನು ಗಳಿಸಿದರು. ಇಲ್ಲಿಂದ ಥಾಯ್ಲೆಂಡ್ ಆಟಗಾರ ಹಿಂತಿರುಗಿ ನೋಡಲೇ ಇಲ್ಲ. ಪರಿಣಾಮ ಪ್ರಣಯ್ 13-21 ರಿಂದ ಸೋಲು ಕಂಡರು.
ಮೂರನೇ ಹಾಗೂ ನಿರ್ಣಾಯಕ ಗೇಂನಲ್ಲಿ ಉಭಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು. ಈ ಹಂತದಲ್ಲೂ ಎದುರಾಳಿ ಆಟಗಾರ ಮುನ್ನಡೆಯನ್ನು ಕಾಯ್ದುಕೊಂಡರು. ಪರಿಣಾಮ ಈ ಗೇಮ್ ಯಾವುದೇ ಹಂತದಲ್ಲೂ ಪ್ರಣಯ್ ಚೇತರಿಸಿಕೊಳ್ಳುವ ಸೂಚನೆಯನ್ನೇ ನೀಡಲಿಲ್ಲ. ಪರಿಣಾಮ ಪದಕದ ಬಣ್ಣ ಕಂಚಿಗೆ ತೃಪ್ತಿ ಪಡಬೇಕಾಯಿತು.
ಕ್ವಾರ್ಟರ್ ಫೈನಲ್ ನಲ್ಲಿ ಪ್ರಣಯ್ ಅವರು ವಿಶ್ವದ ನಂ.1 ಆಟಗಾರ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದ್ದರು. ಆ ಗೇಂನಲ್ಲಿ ಅವರು ಮೊದಲ ಗೇಂನಲ್ಲೇ 21-13ರಿಂದ ಸೋಲು ಅನುಭವಿಸಬೇಕಾಯಿತು. ಮೊದಲ ಗೇಂನಲ್ಲಿ ಸೋತ ನಂತರ, ಪ್ರಣಯ್ ಭರ್ಜರಿ ಪ್ರದರ್ಶನ ನೀಡಿ ಕೊನೆಯ ಎರಡು ಗೇಂಗಳನ್ನು 21-15, 21-16 ರಿಂದ ಗೆದ್ದು ಸೆಮಿಫೈನಲಿಗೆ ಪ್ರವೇಶಿಸಿದ್ದರು.
ಪ್ರಣಯ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿಗೆ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಭಾರತಕ್ಕಾಗಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಐದನೇ ಭಾರತೀಯ ಎಂಬ ಹಿರಿಮೆ ಇವರು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಕಾಶ್ ಪಡುಕೋಣಿ (1983), ಬಿ ಸಾಯಿ ಪ್ರಣೀತ್ (2019), ಮತ್ತು ಲಕ್ಷ್ಯ ಸೇನ್ (2021) ಕಂಚಿನ ಪದಕ ಗೆದ್ದಿದ್ದರು. ಇನ್ನು ಕಿಡಂಬಿ ಶ್ರೀಕಾಂತ್ 2021ರಲ್ಲಿ ಬೆಳ್ಳಿ ಪದಕಕ್ಕೆ ಕೊರಳು ಒಡ್ಡಿದ್ದರು. ಭಾನುವಾರ ನಡೆಯುವ ಪ್ರಶಸ್ತಿ ಪಂದ್ಯದ ನಂತರ ಪ್ರಣಯ್ ಕಂಚಿನ ಪದಕ ಪಡೆಯಲಿದ್ದಾರೆ.